ರಾಹುಲ್ ಟೀಕೆಗೆ ತಮ್ಮದೇ ಪಕ್ಷದ ಪಿಟ್ರೋಡಾರಿಂದಲೇ ತಕ್ಕ ಉತ್ತರ: ಸಂಸದ ರಮೇಶ ಜಿಗಜಿಣಗಿ ಲೇವಡಿ
ವಿಜಯಪುರ, 16 ನವೆಂಬರ್ (ಹಿ.ಸ.) ಫೋನ್ ಕದ್ದಾಲಿಕೆ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪವು ರಾಜಕೀಯ ಪ್ರಚಾರದ ಮತ್ತೊಂದು ಹತಾಶ ಪ್ರಯತ್ನವಾಗಿದೆ. ಈ ಆರೋಪಕ್ಕೆ ಅವರದೇ ಪಕ್ಷದ ಹಿರಿಯ ನಾಯಕ ಸ್ಯಾಮ್ ಪಿಟ್ರೋಡಾ ಅವರ ಹೇಳಿಕೆಯೇ ತಕ್ಕ ಉತ್ತರ ನೀಡಿದೆ ಎಂದು ವಿಜಯಪುರ ಸಂಸದ
ಫೋನ್ ಕದ್ದಾಲಿಕೆ


ವಿಜಯಪುರ, 16 ನವೆಂಬರ್ (ಹಿ.ಸ.)

ಫೋನ್ ಕದ್ದಾಲಿಕೆ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪವು ರಾಜಕೀಯ ಪ್ರಚಾರದ ಮತ್ತೊಂದು ಹತಾಶ ಪ್ರಯತ್ನವಾಗಿದೆ. ಈ ಆರೋಪಕ್ಕೆ ಅವರದೇ ಪಕ್ಷದ ಹಿರಿಯ ನಾಯಕ ಸ್ಯಾಮ್ ಪಿಟ್ರೋಡಾ ಅವರ ಹೇಳಿಕೆಯೇ ತಕ್ಕ ಉತ್ತರ ನೀಡಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿಯವರ ಹೇಳಿಕೆಗಳ ಕುರಿತು ಲೇವಡಿ ಮಾಡಿರುವ ಸಂಸದರು, ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಕಾರ್ಯವೈಖರಿಯ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಿರಿಯ ನಾಯಕರ ಹೇಳಿಕೆಯನ್ನೇ ಕೇಳದಷ್ಟು ಅಹಂಕಾರವೇ

ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ರಮೇಶ ಜಿಗಜಿಣಗಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಕದ್ದಾಲಿಕೆ ಮಾಡುವುದಿಲ್ಲ, ಅವರು ಕಂಪ್ಯೂಟರ್ ಮುಂದೆ ಕುಳಿತು ಇಂತಹ ಕೆಲಸ ಮಾಡುವವರಲ್ಲ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಸ್ಯಾಮ್ ಪಿಟ್ರೋಡಾ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ತಮ್ಮದೇ ಪಕ್ಷದ ಹಿರಿಯ ನಾಯಕರೇ ರಾಹುಲ್ ಗಾಂಧಿಯವರ ಆರೋಪದಿಂದ ದೂರ ಸರಿದಿರುವಾಗ, ಇನ್ನಾದರೂ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮದೇ ಪಕ್ಷದ ಹಿರಿಯ ನಾಯಕರ ಹೇಳಿಕೆಯನ್ನು ಕೇಳಿಸಿಕೊಳ್ಳದಷ್ಟು ರಾಹುಲ್ ಗಾಂಧಿ ರಾಜಕೀಯ ಅಹಂಕಾರ ಬೆಳೆಸಿಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಆಧಾರರಹಿತ ಆರೋಪಗಳೇ ಕಾಂಗ್ರೆಸ್ನ ಅಸ್ತ್ರ

ರಾಹುಲ್ ಗಾಂಧಿಯವರಿಗೆ ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಂದಲ್ಲ ಒಂದು ವಿವಾದ ಸೃಷ್ಟಿಸುವುದು, ಆಧಾರರಹಿತ ಆರೋಪ ಮಾಡುವುದು, ಬಳಿಕ ಅದಕ್ಕೆ ಸಮರ್ಪಕ ದಾಖಲೆ ನೀಡದೆ ಮತ್ತೊಂದು ಆರೋಪದತ್ತ ಹೊರಳುವುದು ಅವರ ರಾಜಕೀಯ ಶೈಲಿಯಾಗಿದೆ. ಕಳೆದ ಒಂದು ದಶಕದಿಂದ ಮೋದಿ ಅವರ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತ ಬಂದಿದ್ದಾರೆ. ಆದರೆ ದೇಶದ ಜನತೆ ಪ್ರತಿಬಾರಿಯೂ ತಮ್ಮ ಮತದಾನದ ಮೂಲಕ ಇಂತಹ ರಾಜಕೀಯ ಆರೋಪಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಜಿಗಜಿಣಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಈಗ ನಾಯಕತ್ವದ ಬಿಕ್ಕಟ್ಟು ಮಾತ್ರವಲ್ಲ, ವಿಶ್ವಾಸಾರ್ಹತೆಯ ಬಿಕ್ಕಟ್ಟೂ ಎದುರಾಗಿದೆ. ಗಾಂಧಿ ಕುಟುಂಬದ ರಾಜಕೀಯದಲ್ಲಿ ಆರೋಪಗಳೇ ಅಸ್ತ್ರವಾಗಿವೆ. ಪ್ರಧಾನಿ ಮೋದಿಯವರ ಜನಪ್ರಿಯತೆ, ಆಡಳಿತದ ಸಾಧನೆ ಮತ್ತು ದೇಶದ ಅಭಿವೃದ್ಧಿಯ ಪಯಣವನ್ನು ಎದುರಿಸಲು ಸಾಧ್ಯವಾಗದೆ ವೈಯಕ್ತಿಕ ಆರೋಪಗಳ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕುಟುಂಬ ರಾಜಕಾರಣದಿಂದ ಹೊರಬರಲು ಸಲಹೆ

ಪ್ರಧಾನಿ ಹುದ್ದೆಯ ಮಹತ್ವದ ಕುರಿತು ಉಲ್ಲೇಖಿಸಿರುವ ಸಂಸದರು, ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಕಾಣುವುದರಲ್ಲಿ ತಪ್ಪಿಲ್ಲ. ಆದರೆ ದೇಶದ ಜನರ ವಿಶ್ವಾಸ ಗಳಿಸದೆ, ಸಂಸತ್ತಿನಲ್ಲಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸದೆ, ಪ್ರತಿಯೊಂದು ವಿಷಯದಲ್ಲೂ ಆರೋಪಗಳನ್ನೇ ರಾಜಕೀಯ ಬಂಡವಾಳ ಮಾಡಿಕೊಂಡು ಪ್ರಧಾನಿಯಾಗಲು ಸಾಧ್ಯವಿಲ್ಲ. ಪ್ರಧಾನಿ ಹುದ್ದೆ ಎಂಬುದು ಕೇವಲ ಅಧಿಕಾರದ ಕನಸಲ್ಲ; ಅದು ದೇಶದ ಜನರ ವಿಶ್ವಾಸ, ಜವಾಬ್ದಾರಿ ಮತ್ತು ಸಮರ್ಥ ನಾಯಕತ್ವದ ಪ್ರತೀಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಜಕೀಯ ಭವಿಷ್ಯವನ್ನು ಉಳಿಸಬೇಕಾದರೆ ಮೊದಲು ಗಾಂಧಿ ಕುಟುಂಬದ ಸುತ್ತ ಸುತ್ತುವ ರಾಜಕಾರಣದಿಂದ ಹೊರಬರಬೇಕು ಮತ್ತು ದೇಶದ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ರಾಜಕಾರಣ ಮಾಡಬೇಕು. ಇಲ್ಲವಾದರೆ ಈಗಾಗಲೇ ರಾಜಕೀಯವಾಗಿ ಕುಸಿತದ ಹಾದಿಯಲ್ಲಿರುವ ಕಾಂಗ್ರೆಸ್ ಪಕ್ಷ ಮತ್ತಷ್ಟು ನಿರ್ನಾಮದತ್ತ ಸಾಗುವುದು ನಿಶ್ಚಿತ ಎಂದು ಸಂಸದ ರಮೇಶ ಜಿಗಜಿಣಗಿ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande