ಭದ್ರಾ ನೀರು ಬಿಡುಗಡೆ ಆದೇಶಕ್ಕೆ ದಾವಣಗೆರೆ ರೈತರ ಆಕ್ರೋಶ
ದಾವಣಗೆರೆ, 16 ನವೆಂಬರ್ (ಹಿ.ಸ.): ಭದ್ರಾ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿರುವುದಕ್ಕೆ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಬಿಡುಗಡೆ ವಿಚಾರದಲ್ಲಿ ಎಲ್ಲ ರೈತರ ಹಿತಾಸಕ್ತಿ ಪ
Bhadra-Dam-Water-Release-Order-Davangere-Farmers-Protest


ದಾವಣಗೆರೆ, 16 ನವೆಂಬರ್ (ಹಿ.ಸ.):

ಭದ್ರಾ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿರುವುದಕ್ಕೆ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರು ಬಿಡುಗಡೆ ವಿಚಾರದಲ್ಲಿ ಎಲ್ಲ ರೈತರ ಹಿತಾಸಕ್ತಿ ಪರಿಗಣಿಸದೆ, ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿರುವ ರೈತರು, ಸರ್ಕಾರ ತಕ್ಷಣ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ದಾವಣಗೆರೆಯಲ್ಲಿ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ರೈತ ಮುಖಂಡ ಚಂದ್ರಶೇಖರ ಪೂಜಾರಿ, ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು.

ಮೇಲ್ಭಾಗದ ರೈತರ ಅಡಿಕೆ ತೋಟಗಳು ಒಣಗುತ್ತಿವೆ ಎಂಬ ಕಾರಣ ನೀಡಿ ನೀರು ಬಿಡುಗಡೆಗೆ ಆದೇಶಿಸಲಾಗಿದೆ. ಆದರೆ ಅಡಿಕೆ ಬೆಳೆ ಕೇವಲ ನಾಲೆಯ ಮೇಲ್ಭಾಗದಲ್ಲಿ ಮಾತ್ರವಿಲ್ಲ. ನಾಲೆಯ ಕೆಳಭಾಗದಲ್ಲಿರುವ ರೈತರ ಅಡಿಕೆ ತೋಟಗಳ ಸ್ಥಿತಿಯನ್ನೂ ಸರ್ಕಾರ ಪರಿಗಣಿಸಬೇಕಿತ್ತು. ಮೇಲ್ಭಾಗದ ರೈತರ ಹಿತ ಕಾಯುವ ಭರದಲ್ಲಿ ಕೆಳಭಾಗದ ರೈತರ ಬೆಳೆಗಳು ನಾಶವಾಗಬೇಕೇ ಎಂದು ಪ್ರಶ್ನಿಸಿದರು.

ಪ್ರಸ್ತುತ ಭದ್ರಾ ಜಲಾಶಯದಲ್ಲಿ 55.5 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಇಂತಹ ಸಂದರ್ಭದಲ್ಲಿ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಚರ್ಚಿಸಿ, ಎಲ್ಲ ರೈತರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಬೇಕಿತ್ತು.

ಆದರೆ ಸಮಿತಿಯ ಒಪ್ಪಿಗೆ ಪಡೆಯದೆ, ಒಬ್ಬ ಶಾಸಕರ ಮಾತಿಗೆ ಮಣಿದು ಸರ್ಕಾರ ನಿರ್ಧಾರ ಕೈಗೊಂಡಿರುವುದು ದಾವಣಗೆರೆ ಜಿಲ್ಲೆಯ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಿನ ಬಿಡುಗಡೆಗೆ ನಿಗದಿತ ದಿನಾಂಕ ಪ್ರಕಟಿಸಿ ಸತತವಾಗಿ 105ರಿಂದ 110 ದಿನಗಳ ಕಾಲ ನೀರು ಹರಿಸಿದರೆ ನಾಲೆಯ ಕೊನೆಯ ಭಾಗದ ರೈತರಿಗೂ ಅನುಕೂಲವಾಗಲಿದೆ.

ನಿರಂತರವಾಗಿ ನೀರು ಹರಿಸಿದರೆ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೂ ಸಮಾನವಾಗಿ ಅನುಕೂಲವಾಗುತ್ತದೆ. ಈ ಕುರಿತು ನೀರಾವರಿ ತಜ್ಞರು ಹಾಗೂ ರೈತ ಮುಖಂಡರನ್ನು ಕರೆದು ಚರ್ಚಿಸುವ ಜ್ಞಾನ ಸರ್ಕಾರಕ್ಕೆ ಇರಬೇಕಿತ್ತು ಎಂದು ಟೀಕಿಸಿದರು.

ಬೇಸಿಗೆಗಾಗಿ ನೀರನ್ನು ಕಾಯ್ದಿರಿಸುವುದಾಗಿ ಹೇಳಿದ್ದ ಸರ್ಕಾರ, ಹಿರಿಯೂರು ಉಪಚುನಾವಣೆಯ ಹಿನ್ನೆಲೆಯಲ್ಲಿ ನಾಲ್ಕು ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಿತ್ತು. ಈಗ ರೈತರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ, ತನಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ ಅವರ ವಿರುದ್ಧವೂ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ದಾವಣಗೆರೆ ಜಿಲ್ಲೆಯ ರೈತರಿಗೆ ಮರಣಶಾಸನವಾಗಲಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಚಂದ್ರಶೇಖರ ಪೂಜಾರಿ ಎಚ್ಚರಿಕೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande