ಪುತ್ರನ ಸಿನಿಮಾ ಬಿಡುಗಡೆಗೆ ರಾಜಕೀಯ ಅಡ್ಡಿ: ನಟ ಶಶಿಕುಮಾರ್ ಅಸಮಾಧಾನ
ಪುತ್ರನ ‘ರಾಶಿ’ ಸಿನಿಮಾ ಬಿಡುಗಡೆಗೆ ಚಿತ್ರಮಂದಿರಗಳಲ್ಲಿ ರಾಜಕೀಯ ಅಡ್ಡಿ ಮಾಡಲಾಗುತ್ತಿದೆ. ಬುಕ್ ಆಗಿದ್ದ ಚಿತ್ರಮಂದಿರಗಳಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ನಟ, ಮಾಜಿ ಸಂಸದ ಶಶಿಕುಮಾರ್ ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Actor Shashikumar Alleges Political Interference in Son’s Film Release, Expresses Displeasure


ಮಂಡ್ಯ, 16 ನವೆಂಬರ್ (ಹಿ.ಸ.):

ಪುತ್ರನ ಅಭಿನಯದ ಸಿನಿಮಾ ಬಿಡುಗಡೆಗೆ ಚಿತ್ರಮಂದಿರಗಳಲ್ಲಿ ಅಡ್ಡಿಪಡಿಸಲಾಗುತ್ತಿದೆ. ಸಿನಿಮಾ ಬಿಡುಗಡೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ನಟ ಹಾಗೂ ಮಾಜಿ ಸಂಸದ ಶಶಿಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ತಮ್ಮ ಪುತ್ರನ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಚಿತ್ರಮಂದಿರಗಳ ವ್ಯವಸ್ಥೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಸಿನಿಮಾ ಪ್ರದರ್ಶನಕ್ಕೆ ಥಿಯೇಟರ್ಗಳನ್ನು ಮುಂಗಡವಾಗಿ ಬುಕ್ ಮಾಡಿದ್ದರೂ, ಕೊನೆಯ ಕ್ಷಣದಲ್ಲಿ ಬೇರೆ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಇದರಿಂದ ಚಿತ್ರತಂಡಕ್ಕೆ ಅನ್ಯಾಯವಾಗಿದ್ದು, ತಮಗೆ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸಾಕಷ್ಟು ಸಿನಿಮಾಗಳು ಯಶಸ್ಸು ಕಂಡಿವೆ. ಇಲ್ಲಿನ ಜನರು ನನ್ನ ಪ್ರೀತಿಯ ಜನರು. ನಮ್ಮ 'ರಾಶಿ' ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿದೆ. ಆದರೆ, ನಮ್ಮ ಸಿನಿಮಾ ಪ್ರದರ್ಶನಕ್ಕೆ ನಿಗದಿಯಾಗಿದ್ದ ಚಿತ್ರಮಂದಿರಗಳಲ್ಲಿ ಬೇರೆ ಸಿನಿಮಾಗಳನ್ನು ಹಾಕಲಾಗಿದೆ.

ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡದೆ ಅನ್ಯಭಾಷೆಯ ಸಿನಿಮಾಗಳಿಗೆ ಮಣೆ ಹಾಕಲಾಗುತ್ತಿದೆ. ಇದು ಕನ್ನಡ ಚಿತ್ರರಂಗಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾವು ಸಂಸದರಾಗಿದ್ದ ಚಿತ್ರದುರ್ಗದಲ್ಲಿಯೂ ತಮ್ಮ ಪುತ್ರನ ಸಿನಿಮಾಗೆ ಚಿತ್ರಮಂದಿರ ನೀಡದೆ ತೆಲುಗು ಸಿನಿಮಾವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿದ ಶಶಿಕುಮಾರ್, ಇದೆಲ್ಲದರ ಹಿಂದೆ ರಾಜಕೀಯ ಇಲ್ಲವೇ? ಸಿನಿಮಾ ಬಿಡುಗಡೆಯಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ನಮ್ಮವರೇ ನಮಗೆ ಶತ್ರುಗಳಾಗಿದ್ದಾರೆ. ಕನ್ನಡ ಸಿನಿಮಾಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಸಿನಿಮಾ ಬಿಡುಗಡೆ ವಿಚಾರದಲ್ಲಿ ನಡೆಯುತ್ತಿರುವ ಈ ರೀತಿಯ ಬೆಳವಣಿಗೆಗಳಿಂದ ಚಿತ್ರತಂಡಕ್ಕೆ ತೊಂದರೆಯಾಗುತ್ತಿದೆ. ಈ ಅನ್ಯಾಯದ ವಿರುದ್ಧ ತಾವು ಧ್ವನಿ ಎತ್ತುವುದಾಗಿ ತಿಳಿಸಿದ ಅವರು, ಈ ವಿಚಾರವನ್ನು ಸುಮ್ಮನೆ ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಸೂಕ್ತ ಅವಕಾಶ ಮತ್ತು ಆದ್ಯತೆ ದೊರೆಯಬೇಕು ಎಂಬುದು ತಮ್ಮ ಒತ್ತಾಯವಾಗಿದ್ದು, ಸಿನಿಮಾ ಬಿಡುಗಡೆ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು ಎಂದು ನಟ ಶಶಿಕುಮಾರ್ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande