
ಬಳ್ಳಾರಿ, 08 ಅಕ್ಟೋಬರ್ (ಹಿ.ಸ.)
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಲ್ಲಿ ಉತ್ತಮ ಆರೋಗ್ಯ ನಿರ್ವಹಣೆಗಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕ್ಷೇಮಾಭಿವೃದ್ಧಿ ಸಂಘ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 216 ನೌಕರರು ಆರೋಗ್ಯ ತಪಾಸಣೆಗೆ ಒಳಗಾಗಿ, ಔಷಧಿಗಳನ್ನು ಪಡೆದಿದ್ದಾರೆ.
ಈ ಶಿಬಿರದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಒಟ್ಟು 17 ಪ್ರತ್ಯೇಕ ತಪಾಸಣಾ ಕೌಂಟರ್ಗಳನ್ನು ತೆರೆಯಲಾಗಿತ್ತು. ಮಾನಸಿಕ, ಚರ್ಮರೋಗ, ಇಸಿಜಿ, ಎಕ್ಸ್-ರೇ ಹಾಗೂ ಕ್ಷಯ ಸೇರಿದಂತೆ ಸಂಪೂರ್ಣ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕಾಗಿ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಯಿತು.
ರಕ್ತದೊತ್ತಡ ಮತ್ತು ಮಧುಮೇಹಕ್ಕೆ 152 ಜನರಿಗೆ ರಕ್ತದೊತ್ತಡ ಹಾಗೂ 118 ಜನರಿಗೆ ಮಧುಮೇಹ ಪರೀಕ್ಷೆ ನಡೆಸಲಾಯಿತು.
ಹೆಚ್.ಐ.ವಿ ಕ್ಯೂಆರ್ ಕೋಡ್ (208), ಹೆಚ್.ಐ.ವಿ ತಪಾಸಣೆ (119), ಸಿ.ಬಿ.ಸಿ (32), ರಕ್ತಹೀನತೆ (03), ಎಕ್ಸ್-ರೇ (36), ಸ್ಪೂಟಮ್ (03) ಮತ್ತು ಇಸಿಜಿ (52) ಪರೀಕ್ಷೆಗಳನ್ನು ಕೈಗೊಳ್ಳಲಾಯಿತು.
ಕಣ್ಣಿನ ತಪಾಸಣೆ (118), ದಂತ ಪರೀಕ್ಷೆ (36), ಇಎನ್ಟಿ (29), ಚರ್ಮರೋಗ (26), ಜನರಲ್ ಮೆಡಿಸಿನ್ (18) ಹಾಗೂ ಕೀಲು-ಮೂಳೆ ತಜ್ಞರಿಂದ 13 ಜನರಿಗೆ ಚಿಕಿತ್ಸೆ ನೀಡಲಾಯಿತು.
ಶಸ್ತ್ರಚಿಕಿತ್ಸೆ ಆಪ್ತ ಸಮಾಲೋಚನೆಗೆ 11, ಮಾನಸಿಕ/ತಂಬಾಕು ನಿಯಂತ್ರಣ ಸಮಾಲೋಚನೆಗೆ 13 ಹಾಗೂ ಪ್ರಸೂತಿ ಆರೈಕೆಗೆ 17 ನೌಕರರು ಒಳಪಟ್ಟರು. ಜೊತೆಗೆ 06 ಜನರಿಗೆ ಹೆಚ್.ಪಿ.ವಿ ಹಾಗೂ 16 ಜನರಿಗೆ ಹೆಪಟೈಟಿಸ್-ಬಿ ಲಸಿಕೆ ನೀಡಲಾಯಿತು.
ನೌಕರರು ಸ್ವಯಂಪ್ರೇರಿತರಾಗಿ 16 ಯೂನಿಟ್ ರಕ್ತದಾನ ಮಾಡಿದರು ಮತ್ತು ಇಬ್ಬರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್