


ಬಳ್ಳಾರಿ, 08 ಅಕ್ಟೋಬರ್ (ಹಿ.ಸ.)
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹಧನ ಮತ್ತು ಗೌರವಧನವನ್ನು ಒಟ್ಟಿಗೆ ಸೇರಿಸಿ ಆಶಾ ಕಾರ್ಯಕರ್ತೆಯರಿಗೆ ರೂ.15,000 ರೂಪಾಯಿಗಳನ್ನು ನಿಗದಿ ಮಾಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕವು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಇರುವ ಪೆÇ್ರೀತ್ಸಾಹಧನ ಮತ್ತು ಗೌರವಧನ ಸೇರಿಸಿ ರೂ. 15,000 ಮಾಸಿಕ ಗೌರವಧನ ನೀಡಿರಿ. ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್ ಕೊಡಬೇಕು ಮತ್ತು ಈ ಪತ್ರದಲ್ಲಿ ನಮೂದಿಸಿರುವ ವಿವಿಧ ಸಮಸ್ಯೆಗಳನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಎನ್ಎಚ್ಎಂ ಮಾರ್ಗಸೂಚಿ ಪ್ರಕಾರ ನಿಕ್ಷಯ್ ಆಪ್ ಕೆಲಸ ಆಶಾ ಕಾರ್ಯಕರ್ತೆಯರದ್ದಲ್ಲ, ಆದರೂ ಆ ಕೆಲಸ ಮಾಡಬೇಕೆಂದು ಒತ್ತಡ ಹೇರುವುದನ್ನು ನಿಲ್ಲಿಸಿ. ಇಡೀ ಜಿಲ್ಲೆಯ ಬಾಕಿಯಿರುವ 1 ತಿಂಗಳ ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆ ಮಾಡಿ. ಎಲ್ಲಾ ಆಶಾ ಕಾರ್ಯಕರ್ತೆಯರಿಗೆ 2026 ಜನವರಿ ತಿಂಗಳ ಪ್ರೋತ್ಸಾಹ ಧನ ಇನ್ನೂ ಪಾವತಿಯಾಗಿಲ್ಲ, ಈ ಕೂಡಲೇ ಬಿಡುಗಡೆ ಮಾಡಿ.
ಆರ್.ಸಿ.ಎಚ್ ಪೋರ್ಟಲ್ ಮೂಲಕ ಕೇಂದ್ರದ ಪ್ರೋತ್ಸಾಹಧನ ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಬರುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ. ಆಶಾಗಳಿಗೆ ಹಲವು ವರ್ಷಗಳಿಂದ ಬಾಕಿಯಿರುವ ಭಾಗಶಃ ಪ್ರೋತ್ಸಾಹಧನ ಹಾಗೂ ವಿವಿಧ ಕಾಂಪೋನೆಂಟ್ಗಳ (ಟಿಬಿ, ಟಿಬಿಐ, ಎನ್ಸಿಡಿ, ಇತ್ಯಾದಿ.) ಹಣ ಪಾವತಿಸಲು ಕ್ರಮಕೈಗೊಳ್ಳಿ.
10 ವರ್ಷ ಸೇವೆ ಸಲ್ಲಿಸಿ ಕೆಲಸ ಬಿಟ್ಟಿರುವ / ನಿವೃತ್ತಿ ಆಗಿರುವ ಆಶಾಗಳಿಗೆ ನಿಯಮಾನುಸಾರ ಬಾಕಿಯಿರುವ ಇಡಗÀಂಟು ಪಾವತಿಸಿ. ಸ್ಫೂಟಂ/ಕಫ ತರುವಂತೆ ಆಶಾಗಳನ್ನು ಒತ್ತಾಯಿಸಬಾರದು ಎಂದು ರಾಜ್ಯದ ಮತ್ತು ಜಿಲ್ಲೆಯ ಸುತ್ತೋಲೆಗಳು ಇದ್ದಾಗ್ಯೂ ತಳಹಂತದಲ್ಲಿ ಕಫ ತರುವಂತೆ ಒತ್ತಾಯಿಸಲಾಗುತ್ತಿದೆ, ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ.
ಆಶಾಗಳು ಜಿಪಿಎಸ್ ಲೊಕೇಶನ್ ಹಾಕಬೇಕೆಂಬ ನಿಯಮ/ನಿರ್ದೇಶನಗಳಿಲ್ಲ, ಒತ್ತಡ ಹೇರದಂತೆ ಕ್ರಮ ಕೈಗೊಳ್ಳಿ. ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಕ್ಲೇಮ್ ಮತ್ತು ರಿಲೀಸ್ ಕಾಪಿ ಒದಗಿಸಿ. ಆಶಾಗಳಿಗೆ ಪಾವತಿಯಾದ ಪ್ರೋತ್ಸಾಹಧನ ಯಾವ ತಿಂಗಳಿನದ್ದು ಎಂದು ಪಾಸ್ ಬುಕ್ನಲ್ಲಿ ನಿರ್ದಿಷ್ಟವಾಗಿ ನಮೂದಿಸಲು ಸೂಕ್ತ ಕ್ರಮ ಕೈಗೊಳ್ಳಿ.
ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರ ಕಳೆದ ಒಂದು ವರ್ಷದಲ್ಲಿ ಪಾವತಿಯಾಗಿರುವ ಗೌರವಧನ ಹಾಗೂ ಪ್ರೋತ್ಸಾಹಧನದ (ಎಂಸಿಟಿಎಸ್, ನಾನ್-ಎಂಸಿಟಿಎಸ್, ಟಿಬಿಐ, ಇತ್ಯಾದಿ ವಿವರಗಳುಳ್ಳ) ಮಾಹಿತಿಯ ಸಾಫ್ಟ್ ಕಾಪಿಯನ್ನು ಆಶಾ ಸಂಘಕ್ಕೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಡಿ. ನಾಗಲಕ್ಷ್ಮಿ, ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಎ. ದೇವದಾಸ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಆಶಾ ಸಂಘದ ಜಿಲ್ಲಾಧ್ಯಕ್ಷರು ಎಂ. ಗೀತಾ ಅವರು ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಎನ್., ಆಶಾ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಣಿಕ್ಯ ಹಾಗೂ ಆಶಾ ಸಂಘದ ಸದಸ್ಯರಾದ ರೇಷ್ಮ, ಜಲಾಜಾಕ್ಷಿ, ಈರಮ್ಮ, ರಾಜೇಶ್ವರಿ, ಹನುಮಂತಮ್ಮ ಹಾಗೂ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್