
ಬೆಂಗಳೂರು, 07 ಅಕ್ಟೋಬರ್ (ಹಿ.ಸ.):
ರಾಜ್ಯದ ಜನತೆಗೆ ಒಂದಾದ ಮೇಲೊಂದು ಬೆಲೆ ಏರಿಕೆಯ ಬರೆ ಬೀಳುತ್ತಿದ್ದು, ಇದೀಗ ಅಕ್ಕಿ ದರದಲ್ಲೂ ಭಾರಿ ಏರಿಕೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕನೇ ಬಾರಿಗೆ ಅಕ್ಕಿ ಬೆಲೆ ಹೆಚ್ಚಳವಾಗಿದ್ದು, ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಅ.6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳ ಹಾಗೂ ಸರ್ಕಾರಿ ಬಸ್ಗಳ ಟಿಕೆಟ್ ದರ ಪರಿಷ್ಕರಣೆ ಕುರಿತು ಚರ್ಚೆ ನಡೆದಿರುವ ಬೆನ್ನಲ್ಲೇ ಅಕ್ಕಿ ದರ ಏರಿಕೆ ಗ್ರಾಹಕರಿಗೆ ಮತ್ತೊಂದು ಆಘಾತ ನೀಡಿದೆ.
ಯಾವ ಅಕ್ಕಿ ಎಷ್ಟು ದುಬಾರಿ?ಮಾರುಕಟ್ಟೆಯಲ್ಲಿ ವಿವಿಧ ವಿಧದ ಅಕ್ಕಿಯ ದರ ಗಣನೀಯವಾಗಿ ಏರಿಕೆಯಾಗಿದೆ. ಕೋಲಂ ಅಕ್ಕಿ ಕೆ.ಜಿಗೆ ₹75ರಿಂದ ₹110ಕ್ಕೆ, ಬಾಸುಮತಿ ಅಕ್ಕಿ ₹105ರಿಂದ ₹120ಕ್ಕೆ, ಜೀರಾ ರೈಸ್ ₹115ರಿಂದ ₹125ಕ್ಕೆ ಹಾಗೂ ರಾಜಮುಡಿ ಅಕ್ಕಿ ₹125ರಿಂದ ₹150ಕ್ಕೆ ಏರಿಕೆಯಾಗಿದೆ. ಸ್ಟೀಮ್ ಅಕ್ಕಿಯ ದರ ಕೂಡ ಕೆ.ಜಿಗೆ ₹60ರಿಂದ ₹88ಕ್ಕೆ ಹೆಚ್ಚಳವಾಗಿದೆ.
₹100ರ ಗಡಿ ತಲುಪಿದ ಸೋನಾ ಮಸೂರಿಸೋನಾ ಮಸೂರಿ ಅಕ್ಕಿಯ ದರವೂ ಗಗನಕ್ಕೇರಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ಸುಮಾರು ₹90ಕ್ಕೆ ತಲುಪಿದೆ.
ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 25 ಕೆ.ಜಿ. ಚೀಲದ ದರ ₹1,430ರಿಂದ ₹1,820ಕ್ಕೆ ಏರಿಕೆಯಾಗಿದೆ. ಅಂದರೆ ಒಂದು ಚೀಲಕ್ಕೆ ಸುಮಾರು ₹400ರಷ್ಟು ಹೆಚ್ಚಳವಾಗಿದೆ.
ಕಳೆದ ಎರಡು ತಿಂಗಳಲ್ಲಿ ಸೋನಾ ಮಸೂರಿ ಅಕ್ಕಿಯ ದರ ಕೆ.ಜಿಗೆ ಗಣನೀಯವಾಗಿ ಏರಿಕೆಯಾಗಿದೆ. ಸತತ ಬೆಲೆ ಏರಿಕೆಯಿಂದಾಗಿ ಅಕ್ಕಿ ಖರೀದಿಸಲು ಮಾರುಕಟ್ಟೆಗೆ ಬರುತ್ತಿರುವ ಗ್ರಾಹಕರು ದರ ಕೇಳಿಯೇ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪೂರೈಕೆ ಕೊರತೆಯೇ ಬೆಲೆ ಏರಿಕೆಗೆ ಕಾರಣ?ಬೇಡಿಕೆಗೆ ಅನುಗುಣವಾಗಿ ಅಕ್ಕಿ ಪೂರೈಕೆಯಾಗದಿರುವುದೇ ಸತತ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಮುಂಗಾರು ಮಳೆ ಕೊರತೆಯಿಂದ ರಾಯಚೂರು, ಸಿಂಧನೂರು, ಸಿರಗುಪ್ಪ ಹಾಗೂ ಭದ್ರಾವತಿ ಭಾಗಗಳಲ್ಲಿ ಭತ್ತದ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ ಎಂದು ವ್ಯಾಪಾರಿ ಶಣ್ಮುಗಪ್ಪ ತಿಳಿಸಿದ್ದಾರೆ.
ಇದರ ಜೊತೆಗೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಭತ್ತದ ಇಳುವರಿ ಕುಸಿದಿರುವುದರಿಂದ ಅಕ್ಕಿಗೆ ಬೇಡಿಕೆ ಹೆಚ್ಚಾಗಿದೆ.
ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲೂ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R