
ಬೆಂಗಳೂರು, 07 ಅಕ್ಟೋಬರ್ (ಹಿ.ಸ.):
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಬೋನಸ್ ವಿತರಣೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಒಂದೇ ರೀತಿಯ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರ ನಡುವೆ ಬೋನಸ್ ಹಂಚಿಕೆಯಲ್ಲಿ ವ್ಯತ್ಯಾಸ ಮಾಡಿರುವುದು ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪೌರಕಾರ್ಮಿಕರ ದಿನಾಚರಣೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಮತ್ತು ‘ಡಿ’ ಗ್ರೂಪ್ ನೌಕರರಿಗೆ ತಲಾ ₹22 ಸಾವಿರ ಬೋನಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಈ ಮೊತ್ತವನ್ನು ನೌಕರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡುವಂತೆ ಸೂಚಿಸಲಾಗಿದೆ.
ಆದರೆ ಬೋನಸ್ ವಿತರಣೆಯಲ್ಲಿ ಕೆಲವು ವರ್ಗದ ಪೌರಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಇದೇ ವೇಳೆ, ಬೋನಸ್ ಮೊತ್ತದಲ್ಲಿ ಸಂಘ-ಸಂಸ್ಥೆಗಳು ಅಥವಾ ವ್ಯಕ್ತಿಗಳು ಕಮಿಷನ್ ಅಥವಾ ಪಾಲು ಕೇಳುತ್ತಿದ್ದಾರೆ ಎಂಬ ದೂರುಗಳೂ ಜಿಬಿಎ ಗಮನಕ್ಕೆ ಬಂದಿವೆ.
“ಪೌರಕಾರ್ಮಿಕರಿಗೆ ನೀಡಲಾಗುವ ಬೋನಸ್ ಹಣದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆ ಕಮಿಷನ್ ಅಥವಾ ಪಾಲು ಕೇಳಬಾರದು.
ಇಂತಹ ಪ್ರಕರಣಗಳು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
ಪೌರಕಾರ್ಮಿಕರು ಯಾರಿಗೂ ಬೋನಸ್ ಹಣ ನೀಡಬಾರದು ಹಾಗೂ ಹಣದ ಬೇಡಿಕೆ ಬಂದರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕು” ಎಂದು ಜಿಬಿಎ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪೌರಕಾರ್ಮಿಕರ ಸಮಸ್ಯೆಗಳು ಹಾಗೂ ಅವರ ಬೇಡಿಕೆಗಳನ್ನು ಪರಿಗಣಿಸಿ ಸಮಾನ ಸೌಲಭ್ಯ ಕಲ್ಪಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R