
ಬೆಂಗಳೂರು, 07 ಅಕ್ಟೋಬರ್ (ಹಿ.ಸ.):
ಬೆಂಗಳೂರು ಮೆಟ್ರೋ ನಿಲ್ದಾಣಗಳ ಬಳಿ ಪಾರ್ಕಿಂಗ್ ಸಮಸ್ಯೆ ನಿವಾರಿಸುವ ಉದ್ದೇಶದಿಂದ ನಗರದ 12 ಮೆಟ್ರೋ ನಿಲ್ದಾಣಗಳಲ್ಲಿ ಹೊಸದಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಬಿಎಂಆರ್ಸಿಎಲ್ ಮುಂದಾಗಿದೆ.
ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ವಾಹನಗಳನ್ನು ಅವಲಂಬಿಸುತ್ತಿದ್ದ ಹಲವು ಪ್ರಯಾಣಿಕರು ಮೆಟ್ರೋ ಬಳಕೆಗೆ ಹಿಂದೇಟು ಹಾಕುತ್ತಿದ್ದರು. ಈ ಸಮಸ್ಯೆ ನಿವಾರಿಸಿ ಹೆಚ್ಚಿನ ಪ್ರಯಾಣಿಕರನ್ನು ಮೆಟ್ರೋ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಈಗಿರುವ ಹಾಗೂ ಮುಂಬರುವ ಗುಲಾಬಿ ಮಾರ್ಗ ಸೇರಿದಂತೆ ಹೆಚ್ಚಿನ ಪ್ರಯಾಣಿಕರು ಸಂಚರಿಸುವ 12 ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಬಿಎಂಆರ್ಸಿಎಲ್ ಟೆಂಡರ್ ಆಹ್ವಾನಿಸಿದೆ. ಬೈಕ್, ಕಾರು ಹಾಗೂ ಜೀಪ್ಗಳಿಗೆ ನಿಗದಿತ ಶುಲ್ಕ ವಿಧಿಸಲಾಗುತ್ತಿದ್ದು, ಸೈಕಲ್ಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
ಯಾವೆಲ್ಲ ನಿಲ್ದಾಣಗಳಲ್ಲಿ ಪಾರ್ಕಿಂಗ್?ನಲ್ಲೂರುಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 82 ಬೈಕ್ಗಳು, ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಲ್ಲಿ 186, ಹೊಸಹಳ್ಳಿಯಲ್ಲಿ 156 ಹಾಗೂ ಪಟ್ಟಣಗೆರೆಯಲ್ಲಿ 328 ಬೈಕ್ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಮಾದಾವರದಲ್ಲಿ 328, ಚಿಕ್ಕಬಿದರಕಲ್ಲಿನಲ್ಲಿ 355, ಮಂತ್ರಿ ಸ್ಕ್ವೇರ್ನಲ್ಲಿ 450 ಬೈಕ್ ಹಾಗೂ 87 ಕಾರು, ರಾಗಿಗುಡ್ಡದಲ್ಲಿ 230, ಬಿಟಿಎಂ ಲೇಔಟ್ನಲ್ಲಿ 216 ಮತ್ತು ತಾವರೆಕೆರೆಯಲ್ಲಿ 155 ಬೈಕ್ಗಳಿಗೆ ಪಾರ್ಕಿಂಗ್ ಸೌಲಭ್ಯ ದೊರೆಯಲಿದೆ.
ಇನ್ನು ಐಐಎಂ-ಬಿ ನಿಲ್ದಾಣದಲ್ಲಿ 55, ಹುಳಿಮಾವು ನಿಲ್ದಾಣದಲ್ಲಿ 155 ಹಾಗೂ ಕಾಳೇನ ಅಗ್ರಹಾರ ನಿಲ್ದಾಣದಲ್ಲಿ 110 ಬೈಕ್ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.
ಒಟ್ಟಾರೆ 12 ಮೆಟ್ರೋ ನಿಲ್ದಾಣಗಳಲ್ಲಿ ಕನಿಷ್ಠ 2,424 ಬೈಕ್ಗಳು ಹಾಗೂ 87 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಗುರಿಯನ್ನು ಬಿಎಂಆರ್ಸಿಎಲ್ ಹೊಂದಿದೆ.
ಪಾರ್ಕಿಂಗ್ ಶುಲ್ಕ ಎಷ್ಟು?ಹೊಸ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬೈಕ್ಗಳಿಗೆ ಮೊದಲ ನಾಲ್ಕು ಗಂಟೆಗೆ ₹15 ಶುಲ್ಕ ನಿಗದಿ ಮಾಡಲಾಗಿದೆ. ಬಳಿಕ ಪ್ರತಿ ಗಂಟೆಗೆ ₹5 ಹಾಗೂ ದಿನದ ಗರಿಷ್ಠ ಪಾರ್ಕಿಂಗ್ ಶುಲ್ಕ ₹30 ಇರಲಿದೆ.
ಕಾರು ಮತ್ತು ಜೀಪ್ಗಳಿಗೆ ಮೊದಲ ನಾಲ್ಕು ಗಂಟೆಗೆ ₹30, ನಂತರ ಪ್ರತಿ ಗಂಟೆಗೆ ₹10 ಶುಲ್ಕ ವಿಧಿಸಲಾಗುತ್ತದೆ. ದಿನದ ಗರಿಷ್ಠ ಪಾರ್ಕಿಂಗ್ ಶುಲ್ಕ ₹60 ಆಗಿರಲಿದೆ.
ಬಿಎಂಆರ್ಸಿಎಲ್ ಹೇಳಿಕೆ: ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಹೆಚ್ಚಿಸುವ ಮೂಲಕ ಖಾಸಗಿ ವಾಹನಗಳಲ್ಲಿ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದು ಹಾಗೂ ಮೆಟ್ರೋ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವುದು ಈ ಕ್ರಮದ ಉದ್ದೇಶವಾಗಿದೆ.
ಪಾರ್ಕಿಂಗ್ ಸಮಸ್ಯೆ ನಿವಾರಣೆಯಿಂದ ಹೆಚ್ಚಿನ ಪ್ರಯಾಣಿಕರನ್ನು ಮೆಟ್ರೋ ಬಳಕೆಗೆ ಸೆಳೆಯಲು ಸಾಧ್ಯವಾಗಲಿದೆ ಎಂದು ನಿಗಮ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R