ಬೆಂಗಳೂರು: ಅಮೆಜಾನ್ ಕಚೇರಿ ಹೊರಗೆ ಟ್ರಾನ್ಸ್ಫಾರ್ಮರ್ ಸ್ಫೋಟ; ಇಬ್ಬರು ಪಾದಚಾರಿಗಳಿಗೆ ಗಾಯ
ಬೆಂಗಳೂರಿನ ಇ-ಕಾಮರ್ಸ್ ಕಚೇರಿ ಹೊರಭಾಗದ ಫುಟ್ಪಾತ್ನಲ್ಲಿದ್ದ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿದ್ದು, ಪಾದಚಾರಿಯೊಬ್ಬರಿಗೆ ಗಾಯವಾಗಿದೆ. ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
bengaluru-transformer-blast-outside-e-commerce-office-pedestrian-injured


ಬೆಂಗಳೂರು, 07 ಅಕ್ಟೋಬರ್ (ಹಿ.ಸ.):

ನಗರದ ಬಾಗಲೂರು ಮುಖ್ಯ ರಸ್ತೆಯ ಬಾಗಲೂರು ಕ್ರಾಸ್ ಸಮೀಪದ ಅಮೆಜಾನ್ ಕಚೇರಿಯ ಗೇಟ್ ನಂ. 3ರ ಹೊರಭಾಗದ ಫುಟ್ಪಾತ್ನಲ್ಲಿ ಅಳವಡಿಸಲಾಗಿದ್ದ ಟ್ರಾನ್ಸ್ಫಾರ್ಮರ್ ಬಾಕ್ಸ್ ಬುಧವಾರ ಬೆಳಿಗ್ಗೆ ಸ್ಫೋಟಗೊಂಡಿದ್ದು, ಇಬ್ಬರು ಪಾದಚಾರಿಗಳು ಗಾಯಗೊಂಡಿದ್ದಾರೆ. ಘಟನೆ ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಿಗ್ಗೆ ಸುಮಾರು 9.49ರ ವೇಳೆಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ ಪಾದಚಾರಿಯೊಬ್ಬರು ನೆಲಕ್ಕೆ ಬಿದ್ದಿದ್ದಾರೆ. ಅವರ ಕೈಗಳಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಗಾಯಾಳುವನ್ನು ಮೊಹಮ್ಮದ್ ಅಫ್ರೋಜ್ ಎಂದು ಗುರುತಿಸಲಾಗಿದೆ.

ಮತ್ತೊಬ್ಬ ಪಾದಚಾರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಗಾಯಗೊಂಡ ಅಫ್ರೋಜ್ ಸುರಕ್ಷಿತವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಮಿಥುನ್ ಕುಮಾರ್ ಸತೇಡ್ ತಿಳಿಸಿದ್ದಾರೆ.

ಸ್ಫೋಟದ ವೇಳೆ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಘಟನೆಯ ದೃಶ್ಯವು ಮಾರ್ಗವಾಗಿ ತೆರಳುತ್ತಿದ್ದ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸ್ಫೋಟದ ನಿಖರ ಕಾರಣದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ” ಎಂದು ಉಪ ಪೊಲೀಸ್ ಆಯುಕ್ತ ಮಿಥುನ್ ಕುಮಾರ್ ಸತೇಡ್ ತಿಳಿಸಿದ್ದಾರೆ.

ಫುಟ್ಪಾತ್ನಲ್ಲೇ ವಿದ್ಯುತ್ ಉಪಕರಣ ಅಳವಡಿಸಲಾಗಿರುವ ಹಿನ್ನೆಲೆಯಲ್ಲಿ, ಜನನಿಬಿಡ ಪ್ರದೇಶಗಳಲ್ಲಿನ ಟ್ರಾನ್ಸ್ಫಾರ್ಮರ್ಗಳ ಸುರಕ್ಷತೆ ಹಾಗೂ ನಿರ್ವಹಣೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ಸ್ಫೋಟದ ನಿಖರ ಕಾರಣ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande