
ಬೆಂಗಳೂರು, 06 ಅಕ್ಟೋಬರ್ (ಹಿ.ಸ.):
ರಫೇಲ್ ಯುದ್ಧವಿಮಾನಗಳಿಗೆ ಅಗತ್ಯವಿರುವ ಪ್ರಮುಖ ಬಿಡಿಭಾಗಗಳ ತಯಾರಿಕೆಯಲ್ಲಿ ಬೆಂಗಳೂರು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಬೆಂಗಳೂರಿನ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಕಂಪನಿ ಹಿಕಲ್ ಟೆಕ್ನಾಲಜೀಸ್ ದೇವನಹಳ್ಳಿಯಲ್ಲಿ ನೂತನ ಏರೋಸ್ಪೇಸ್ ಉತ್ಪಾದನಾ ಘಟಕವನ್ನು ಆರಂಭಿಸಿದೆ.
ದೇವನಹಳ್ಳಿಯಲ್ಲಿ ಆರಂಭಗೊಂಡಿರುವ ಈ ಘಟಕ ಸುಮಾರು 60,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ರಫೇಲ್ ಸೇರಿದಂತೆ ವಾಣಿಜ್ಯ ವಿಮಾನಗಳಿಗಾಗಿ ಎಲೆಕ್ಟ್ರೋಮ್ಯಾಗ್ನೆಟಿಕ್, ಎಲೆಕ್ಟ್ರೋಮೆಕ್ಯಾನಿಕಲ್, ಹೈಡ್ರಾಲಿಕ್ ಹಾಗೂ ಕಂಟ್ರೋಲ್ ಸಿಸ್ಟಮ್ಗಳಿಗೆ ಸಂಬಂಧಿಸಿದ ಸಂಕೀರ್ಣ ಬಿಡಿಭಾಗಗಳ ಉತ್ಪಾದನೆಗೆ ಬಳಸಲಾಗುತ್ತದೆ.
ರಫೇಲ್ ಯುದ್ಧವಿಮಾನಗಳ ಕಂಟ್ರೋಲ್ ಸಿಸ್ಟಮ್ಗೆ ಅಗತ್ಯವಿರುವ ಪ್ರಮುಖ ಉತ್ಪನ್ನಗಳನ್ನು ತಯಾರಿಸಲು ಹಿಕಲ್ಗೆ ಡಸಾಲ್ಟ್ ಏವಿಯೇಷನ್ ದೀರ್ಘಾವಧಿಯ ಒಪ್ಪಂದ ನೀಡಿದೆ.
ಕಂಪನಿಯ ಉತ್ಪನ್ನಗಳು ಡಸಾಲ್ಟ್ನ ಕಠಿಣ ಎಂಜಿನಿಯರಿಂಗ್, ಗುಣಮಟ್ಟ, ಅರ್ಹತೆ ಮತ್ತು ವಿಶ್ವಾಸಾರ್ಹತಾ ಮಾನದಂಡಗಳನ್ನು ಪೂರೈಸಬೇಕಿದೆ.
ಹಿಕಲ್ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಯಶಸ್ ಜೈವೀರ್ ಮಾತನಾಡಿ, “ದೇವನಹಳ್ಳಿ ಘಟಕವು ಸಂಕೀರ್ಣ ಏರೋಸ್ಪೇಸ್ ಮತ್ತು ರಕ್ಷಣಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಜಾಗತಿಕ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇವೆ ಒದಗಿಸುವುದರ ಜತೆಗೆ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಉತ್ಪಾದನಾ ಶಿಸ್ತನ್ನು ಕಾಪಾಡಿಕೊಳ್ಳಲು ಇದು ಸಹಕಾರಿಯಾಗಲಿದೆ” ಎಂದು ಹೇಳಿದ್ದಾರೆ.
ರಫೇಲ್ಗಾಗಿ ಬೆಂಗಳೂರಿನಲ್ಲಿ ಬಿಡಿಭಾಗಗಳ ಉತ್ಪಾದನೆ ಆರಂಭವಾಗಿರುವುದು ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಸರಪಳಿಯಲ್ಲಿ ದೇಶೀಯ ಕಂಪನಿಗಳ ಪಾತ್ರ ವಿಸ್ತರಿಸುತ್ತಿರುವುದಕ್ಕೆ ಉದಾಹರಣೆಯಾಗಿದೆ.
ಡಸಾಲ್ಟ್ ಏವಿಯೇಷನ್ ಕೂಡ ಭಾರತದಲ್ಲಿನ ತನ್ನ ಪೂರೈಕೆದಾರರ ಜಾಲ ವಿಸ್ತರಿಸುತ್ತಿದ್ದು, ಹಿಕಲ್ ಮೂಲಕ ರಫೇಲ್ ಫ್ಲೈಟ್ ಕಂಟ್ರೋಲ್ಗಳಿಗೆ ಸಂಬಂಧಿಸಿದ ನಿಖರ ಬಿಡಿಭಾಗಗಳ ಪೂರೈಕೆಯನ್ನು ಮುಂದುವರಿಸುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R