
ಬೆಂಗಳೂರು, 06 ಅಕ್ಟೋಬರ್ (ಹಿ.ಸ.):
ನಗರದ ದೇವರಬೀಸನಹಳ್ಳಿ ಬಳಿಯಿದ್ದ ಸಾಯಿ ಆರ್ಕೇಡ್ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ವೈಟ್ ಫೀಲ್ಡ್ ನೂತನ ಸ್ಥಳಕ್ಕೆ ಶಾಶ್ವತವಾಗಿ ಸ್ಥಳಾಂತರಿಸಲಾಗಿದೆ.
ಅಕ್ಟೋಬರ್ 5ರಿಂದಲೇ ಹೊಸ ಕೇಂದ್ರದಲ್ಲಿ ಸೇವೆ ಆರಂಭವಾಗಿದ್ದು, ಅ.5 ಅಥವಾ ನಂತರದ ದಿನಾಂಕಗಳಲ್ಲಿ ಅಪಾಯಿಂಟ್ಮೆಂಟ್ ಹೊಂದಿರುವ ಅರ್ಜಿದಾರರು ಹೊಸ ಕಚೇರಿಗೆ ತೆರಳುವಂತೆ ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಸೂಚಿಸಿದೆ.
ವೈಟ್ ಫೀಲ್ಡ್ ಇಪಿಐಪಿ ಝೋನ್ನಲ್ಲಿರುವ ಜಿಎಂ ಟೆಕ್ ಪಾರ್ಕ್, ರಸ್ತೆ ಸಂಖ್ಯೆ 3, ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಸಮೀಪ ನೂತನ ಪಾಸ್ಪೋರ್ಟ್ ಸೇವಾ ಕೇಂದ್ರ ಕಾರ್ಯನಿರ್ವಹಿಸಲಿದೆ.
ದೇವರಬೀಸನಹಳ್ಳಿಯ ಹಳೆಯ ಸಾಯಿ ಆರ್ಕೇಡ್ ಕೇಂದ್ರದಲ್ಲಿ ಅ.5 ಅಥವಾ ನಂತರದ ದಿನಾಂಕಕ್ಕೆ ಅಪಾಯಿಂಟ್ಮೆಂಟ್ ಕಾಯ್ದಿರಿಸಿರುವ ಅರ್ಜಿದಾರರು,
ತಮ್ಮ ಅಪಾಯಿಂಟ್ಮೆಂಟ್ ರಸೀದಿಯಲ್ಲಿ ನಮೂದಿಸಿರುವ ನಿಗದಿತ ಸಮಯಕ್ಕೆ ವೈಟ್ಫೀಲ್ಡ್ನ ಹೊಸ ಕೇಂದ್ರಕ್ಕೆ ಹಾಜರಾಗಬೇಕು ಎಂದು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತಿಳಿಸಿದೆ.
ಹೊಸ ಕೇಂದ್ರದಲ್ಲಿ ಹಳೆಯ ಕಚೇರಿಗಿಂತ ಹೆಚ್ಚಿನ ಸ್ಥಳಾವಕಾಶ ಹಾಗೂ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದ ಅರ್ಜಿದಾರರಿಗೆ ತ್ವರಿತ ಹಾಗೂ ಸುಗಮ ಸೇವೆ ಒದಗಿಸಲು ಅನುಕೂಲವಾಗಲಿದೆ.
ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಸಮೀಪದಲ್ಲಿರುವುದರಿಂದ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕವೂ ಸುಲಭವಾಗಲಿದೆ.“ಅ.5ರಿಂದ ಪಾಸ್ಪೋರ್ಟ್ ಸೇವಾ ಕೇಂದ್ರವು ವೈಟ್ಫೀಲ್ಡ್ನ ಜಿಎಂ ಟೆಕ್ ಪಾರ್ಕ್ನ ಹೊಸ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅ.5 ಅಥವಾ ನಂತರದ ದಿನಾಂಕಗಳಿಗೆ ಹಳೆಯ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಹೊಂದಿರುವವರು ತಮ್ಮ ರಸೀದಿಯಲ್ಲಿ ನಮೂದಿಸಿರುವ ಸಮಯಕ್ಕೆ ಹೊಸ ಕೇಂದ್ರಕ್ಕೆ ಭೇಟಿ ನೀಡಬೇಕು.
ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೆ ಹೊಸ ವಿಳಾಸಕ್ಕೆ ತೆರಳಬೇಕು,” ಎಂದು ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಪಾಸ್ಪೋರ್ಟ್ ಸೇವೆಯ ಅಧಿಕೃತ ವೆಬ್ಸೈಟ್ ಅಥವಾ ಉಚಿತ ಸಹಾಯವಾಣಿ 1800-258-1800 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R