ಕೆಪಿಎಸ್ ಸಿ ನೇಮಕಾತಿ ಅಕ್ರಮ ಪ್ರಕರಣ: ಶಾಂತಾ ಹೊಸಮನಿ ನೀರಿಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಸದಸ್ಯೆ ಶಾಂತಾ ಹೊಸಮನಿಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ ನಿರಾಕರಿಸಿದ್ದು, ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
kpsc-recruitment-scam-case-shanta-hosamani-denied-interim-protection


ಬೆಂಗಳೂರು, 06 ಅಕ್ಟೋಬರ್ (ಹಿ.ಸ.):

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ.

ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಶಾಂತಾ ಹೊಸಮನಿ ಅವರು ಪ್ರಕರಣದಲ್ಲಿ ಎರಡನೇ ಆರೋಪಿ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಅಂಕ ನೀಡಿರುವ ವಿಚಾರವೂ ಪ್ರಕರಣದ ತನಿಖೆಯ ವ್ಯಾಪ್ತಿಯಲ್ಲಿದೆ ಎಂದು ವಾದಿಸಲಾಗಿದೆ. ವಿಚಾರಣೆ ವೇಳೆ ಕೆಪಿಎಸ್ಸಿ ಪರ ವಕೀಲರು ಸಹಾಯಕ ಕಾರ್ಯದರ್ಶಿ ನೀಡಿರುವ ವರದಿಯನ್ನು ಉಲ್ಲೇಖಿಸಿದರು.

ವರದಿಯನ್ನು ತನಿಖಾಧಿಕಾರಿಗೆ ನೀಡಲಾಗಿದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದಾಗ, ಇನ್ನೂ ನೀಡಿಲ್ಲ ಎಂದು ಉತ್ತರಿಸಲಾಯಿತು.

ಶಾಂತಾ ಹೊಸಮನಿ ಪರ ಹಿರಿಯ ವಕೀಲರು, 2025ರ ಜುಲೈನಲ್ಲಿ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು ಹಾಗೂ ಆಯ್ಕೆ ಪ್ರಕ್ರಿಯೆ ಮುಂದುವರಿಸಬಹುದಾದರೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದಂತೆ ಆದೇಶವಿದೆ ಎಂದು ವಾದಿಸಿದರು.

ಮತ್ತೊಂದೆಡೆ, ಸಂದರ್ಶನಕ್ಕೆ ಹಾಜರಾದ ಒಟ್ಟು ಒಂಬತ್ತು ಅಭ್ಯರ್ಥಿಗಳಿಗೆ ನೀಡಲಾದ ಅಂಕಗಳನ್ನು ಪರಿಶೀಲಿಸುವಂತೆ ಸರ್ಕಾರದ ಪರ ವಕೀಲರು ಮನವಿ ಮಾಡಿದರು.

“ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ. ಆರೋಪಗಳ ಸ್ವರೂಪವನ್ನು ಪರಿಗಣಿಸಿ ಅರ್ಜಿಯ ವಿಚಾರಣೆಯನ್ನು ಮುಂದುವರಿಸಲಾಗುವುದು” ಎಂಬ ನಿಲುವನ್ನು ನ್ಯಾಯಾಲಯ ವ್ಯಕ್ತಪಡಿಸಿ, ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande