
ಮೈಸೂರು, 06 ಅಕ್ಟೋಬರ್ (ಹಿ.ಸ.):
ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮೈಸೂರು ಅರಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಈ ನಡುವೆ ಬಹು ಭಾಷಾ ನಟಿ ಕಾಜಲ್ ಅಗರ್ವಾಲ್ ಅವರು ಮೈಸೂರು ಅರಮನೆಗೆ ಭೇಟಿ ನೀಡಿ ಅರಮನೆಯ ವೈಭವವನ್ನು ಕಣ್ತುಂಬಿಕೊಂಡರು.
ಅರಮನೆಗೆ ಆಗಮಿಸಿದ ಕಾಜಲ್ ಅಗರ್ವಾಲ್ ಅವರನ್ನು ಅರಮನೆ ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು.
ಬಳಿಕ ಅರಮನೆಯ ಐತಿಹಾಸಿಕ ಹಿನ್ನೆಲೆ, ವಾಸ್ತುಶಿಲ್ಪ ಹಾಗೂ ಅದರ ಮಹತ್ವದ ಕುರಿತು ನಟಿಗೆ ಅಧಿಕಾರಿಗಳು ವಿವರಿಸಿದರು.
ಅರಮನೆಯ ವೈಭವ ಹಾಗೂ ಐತಿಹಾಸಿಕ ಸೌಂದರ್ಯವನ್ನು ವೀಕ್ಷಿಸಿದ ಕಾಜಲ್ ಅಗರ್ವಾಲ್, ಭೇಟಿಗೆ ಸಂತಸ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.
ನಟಿ ಅರಮನೆಗೆ ಭೇಟಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ಪ್ರವಾಸಿಗರು ಹಾಗೂ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು.
ಈ ವೇಳೆ ಅಭಿಮಾನಿಗಳು ಕಾಜಲ್ ಅಗರ್ವಾಲ್ ಅವರೊಂದಿಗೆ ಫೋಟೋ ಹಾಗೂ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
“ಮೈಸೂರು ಅರಮನೆಯ ಇತಿಹಾಸ ಮತ್ತು ವೈಭವವನ್ನು ತಿಳಿದುಕೊಳ್ಳಲು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಆತ್ಮೀಯ ಸ್ವಾಗತ ಹಾಗೂ ಸನ್ಮಾನಕ್ಕೆ ಧನ್ಯವಾದಗಳು” ಎಂದು ಕಾಜಲ್ ಅಗರ್ವಾಲ್ ಕೃತಜ್ಞತೆ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R