
ಬೆಂಗಳೂರು, 06 ಅಕ್ಟೋಬರ್ (ಹಿ.ಸ.):
ನಗರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಯ ಬೆನ್ನಲ್ಲೇ ಗೊರಗುಂಟೆಪಾಳ್ಯ ಸಿಗ್ನಲ್ ಬಳಿ ಬೃಹತ್ ಮರವೊಂದು ಲಾರಿ ಮೇಲೆ ಬಿದ್ದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಘಟನೆ ಸಂಭವಿಸಿದೆ.
ಮರ ಬಿದ್ದ ಪರಿಣಾಮ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಅಲ್ಲದೆ, ಸಮೀಪದಲ್ಲಿದ್ದ ಎರಡು ಕಾರುಗಳು ಕೂಡ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿವೆ ಎಂದು ತಿಳಿದುಬಂದಿದೆ.
ಮರ ಬಿದ್ದಿದ್ದರಿಂದ ಗೊರಗುಂಟೆಪಾಳ್ಯದಿಂದ ಔಟರ್ ರಿಂಗ್ ರೋಡ್ ಹಾಗೂ ಸುಮ್ಮನಹಳ್ಳಿಯಿಂದ ತುಮಕೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿದ ಕೂಡಲೇ ಜಿಬಿಎ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ಕೈಗೊಂಡರು.
ಬೃಹತ್ ಮರವನ್ನು ತೆರವುಗೊಳಿಸಿದ ಬಳಿಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಜಿಬಿಎ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಸುಮ್ಮನಹಳ್ಳಿ–ತುಮಕೂರು ಮುಖ್ಯರಸ್ತೆ ಸಂಪರ್ಕವೂ ಸಹಜ ಸ್ಥಿತಿಗೆ ಮರಳಿದೆ.
“ಮರ ಬಿದ್ದಿರುವ ಮಾಹಿತಿ ದೊರೆತ ತಕ್ಷಣ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ನಡೆಸಿದರು.
ಮರವನ್ನು ಸಂಪೂರ್ಣವಾಗಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R