
ಬೆಂಗಳೂರು, 06 ಅಕ್ಟೋಬರ್ (ಹಿ.ಸ.):
ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ನಕಲಿ ನೋಟಿಸ್ಗಳನ್ನು ಕಳುಹಿಸಿ, ಪ್ರಕರಣದಿಂದ ಪಾರು ಮಾಡುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆರ್ಟಿಐ ಕಾರ್ಯಕರ್ತ ಮುರಳಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮುರಳಿ, ಲೋಕಾಯುಕ್ತ ಸಂಸ್ಥೆಯ ಅಧಿಕೃತ ಲೆಟರ್ ಹೆಡ್ ಅನ್ನು ನಕಲು ಮಾಡಿಕೊಂಡು, ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿರುವಂತೆ ನಕಲಿ ಪತ್ರಗಳನ್ನು ಸಿದ್ಧಪಡಿಸುತ್ತಿದ್ದ ಎನ್ನಲಾಗಿದೆ.
ಬಳಿಕ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರಿಗೆ ಪತ್ರ ಕಳುಹಿಸಿ, ತಮ್ಮ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಬೆದರಿಸುತ್ತಿದ್ದ.
ಲೋಕಾಯುಕ್ತ ಪ್ರಕರಣದಿಂದ ಪಾರು ಮಾಡುವುದಾಗಿ ನಂಬಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಬಳಿ ನಕಲಿ ಅರಣ್ಯಾಧಿಕಾರಿ ಗುರುತಿನ ಚೀಟಿಯೂ ಪತ್ತೆಯಾಗಿದೆ. ಈ ನಕಲಿ ಐಡಿ ಕಾರ್ಡ್ ಬಳಸಿ ಜನಸಾಮಾನ್ಯರು ಹಾಗೂ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ವಂಚನೆ ಮಾಡುತ್ತಿದ್ದ ಆರೋಪವೂ ಬೆಳಕಿಗೆ ಬಂದಿದೆ.
ಮುರಳಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ವಿಧಾನಸೌಧ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯಿಂದ ನಕಲಿ ಲೋಕಾಯುಕ್ತ ಲೆಟರ್ಹೆಡ್, ದಾಖಲೆಗಳು ಹಾಗೂ ಅರಣ್ಯಾಧಿಕಾರಿ ಹೆಸರಿನ ನಕಲಿ ಗುರುತಿನ ಚೀಟಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇದೇ ರೀತಿಯಲ್ಲಿ ಇನ್ನೆಷ್ಟು ಮಂದಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾನೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆಗಳ ಮೂಲಕ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮುರಳಿಯನ್ನು ಬಂಧಿಸಲಾಗಿದೆ.
ಆತನಿಂದ ನಕಲಿ ದಾಖಲೆಗಳು ಹಾಗೂ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R