
ಬೆಂಗಳೂರು, 06 ಅಕ್ಟೋಬರ್ (ಹಿ.ಸ.):
ನಕಲಿ ದಾಖಲೆ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ ಆರೋಪ ಪ್ರಕರಣದಲ್ಲಿ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.
ಕೈದಿ ಬಿಡುಗಡೆಗೊಂಡ ಬಳಿಕ ತನ್ನ ಪತ್ನಿಗೆ ಕೈಕೊಟ್ಟು ಮತ್ತೊಂದು ಮದುವೆಯಾಗಿದ್ದರಿಂದ ಪ್ರಕರಣ ಬಹಿರಂಗವಾಗಿದೆ ಎನ್ನಲಾಗಿದೆ.
ಅನಾಮಧೇಯ ಪತ್ರವೊಂದರ ಆಧಾರದ ಮೇಲೆ ಕಾರಾಗೃಹ ಇಲಾಖೆ ನಡೆಸಿದ ತನಿಖೆಯಲ್ಲಿ ಈ ಬೃಹತ್ ವಂಚನೆ ಪ್ರಕರಣ ಪತ್ತೆಯಾಗಿದೆ.
ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಶಂಕರ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿದ್ದ ವೇಳೆ ಆತನನ್ನು ಭೇಟಿಯಾಗುತ್ತಿದ್ದ ಪತ್ನಿಯೊಂದಿಗೆ ಡಿಐಜಿ ಅಕ್ರಮ ಸಂಬಂಧ ಹೊಂದಿದ್ದ ಆರೋಪವೂ ಕೇಳಿಬಂದಿದೆ.
2018ರಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರಾಗಿದ್ದ ಸೋಮಶೇಖರ್ ಅವರ ಸಹಾಯದಿಂದ ಶಂಕರ್ ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸಜಾ ಬಂದಿಗಳ ವಿಭಾಗದ ಸಿಬ್ಬಂದಿ ಶ್ರೀಕಾಂತ್ಗೆ ನಕಲಿ ದಾಖಲೆ ಸಿದ್ಧಪಡಿಸುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಬಳಿಕ ಸುಪ್ರೀಂಕೋರ್ಟ್ನ ನಕಲಿ ಆದೇಶವನ್ನು ಆಧಾರವಾಗಿಟ್ಟುಕೊಂಡು ಶಂಕರ್ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಪ್ರಕರಣದ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಶಂಕರ್ ಹಾಗೂ ಶ್ರೀಕಾಂತ್ ಅವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.ಡಿಐಜಿ ವಿಡಿಯೋ ಕಾಲ್ ಬಗ್ಗೆಯೂ ತನಿಖೆತನಿಖೆಯ ವೇಳೆ ಕೈದಿ ಶಂಕರ್ ಪತ್ನಿಗೆ ಡಿಐಜಿ ಸೋಮಶೇಖರ್ ವಿಡಿಯೋ ಕರೆ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಈ ವೇಳೆ ಪತ್ನಿಗೆ ವಿವಸ್ತ್ರವಾಗುವಂತೆ ಸೋಮಶೇಖರ್ ಸೂಚಿಸಿದ್ದರು ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಪೊಲೀಸರು ವಿಡಿಯೋವನ್ನು ವಶಕ್ಕೆ ಪಡೆದುಕೊಂಡಿದ್ದು, ಅದರ ಸತ್ಯಾಸತ್ಯತೆ ಹಾಗೂ ಇತರ ಅಂಶಗಳನ್ನು ಪರಿಶೀಲಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಪ್ರಕರಣದಲ್ಲಿ ನಕಲಿ ದಾಖಲೆ ಸೃಷ್ಟಿ, ಕೈದಿ ಬಿಡುಗಡೆ ಹಾಗೂ ಅಧಿಕಾರ ದುರ್ಬಳಕೆಗೆ ಸಂಬಂಧಿಸಿದ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರೆದಿರುವುದಾಗಿ ಮೂಲಗಳು ತಿಳಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R