
ದಾವಣಗೆರೆ, 06 ಅಕ್ಟೋಬರ್ (ಹಿ.ಸ.):
ಜಿಲ್ಲೆಯ ಹರಿಹರ ತಾಲ್ಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ತುಂಗಾ ಮೇಲ್ದಂಡೆ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿರುವ ಘಟನೆ ನಡೆದಿದೆ.
ಪೈಪ್ಲೈನ್ ಒಡೆದ ಪರಿಣಾಮ ನೀರು ಆಕಾಶದ ಎತ್ತರಕ್ಕೆ ಚಿಮ್ಮಿದ್ದು, ಬಳಿಕ ಗ್ರಾಮದಲ್ಲಿ ಹೊಳೆಯಂತೆ ಹರಿದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಗಮನ ಸೆಳೆದಿದೆ.
ತುಂಗಾ ಮೇಲ್ದಂಡೆ ಯೋಜನೆಯ ಪೈಪ್ಲೈನ್ ತುಂಗಭದ್ರಾ ನದಿಯ ಪಕ್ಕದಲ್ಲಿ ಹಾದುಹೋಗುತ್ತಿದ್ದು, ಶಿವಮೊಗ್ಗ ಭಾಗದ ತುಂಗಾ ನದಿಯಿಂದ ಹೊನ್ನಾಳಿ ಮಾರ್ಗವಾಗಿ ಹಾವೇರಿ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶವನ್ನು ಹೊಂದಿದೆ.
ಈ ಭಾಗದಲ್ಲಿ ಈಗಾಗಲೇ ಮಳೆಯ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ ಪೈಪ್ಲೈನ್ ಒಡೆದು ನೀರು ಪೋಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಗ್ರಾಮಸ್ಥರು ಹಾಗೂ ಜಾನುವಾರುಗಳಿಗೂ ನೀರಿನ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲೇ ಯೋಜನೆಯ ನೀರು ಹೀಗೆ ಪೋಲಾಗುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈಗಾಗಲೇ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಎದುರಾಗಿದೆ. ಜಾನುವಾರುಗಳಿಗೆ ಸಹ ಮೈ ತೊಳೆಯಲು ಹಾಗೂ ಅಗತ್ಯ ಬಳಕೆಗೆ ನೀರು ಸಿಗುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು ಆತಂಕ ಮೂಡಿಸಿದೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R