
ಬೆಂಗಳೂರು, 06 ಅಕ್ಟೋಬರ್ (ಹಿ.ಸ.):
ಕಳೆದ ರಾತ್ರಿ ಸುರಿದ ಮಳೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪರಿಣಾಮ ಹೊಸೂರು ರಸ್ತೆಯ ಚಂದಾಪುರದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆಯೂ ಭಾರಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.
ಚಂದಾಪುರ ದಾಟಲು ವಾಹನಗಳು ಗಂಟೆಗಟ್ಟಲೆ ಸಮಯ ತೆಗೆದುಕೊಂಡಿದ್ದು, ಹಲವು ಕಿ.ಮೀ. ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮುಂಜಾನೆ ಗೂಗಲ್ ಮ್ಯಾಪ್ನಲ್ಲಿ ಚಂದಾಪುರ ಸುತ್ತಮುತ್ತಲಿನ ರಸ್ತೆಗಳು ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಆತಂಕಕ್ಕೊಳಗಾದರು.
ಅತ್ತಿಬೆಲೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಿಂದ ಅತ್ತಿಬೆಲೆ ಕಡೆಗೆ ಸಂಚರಿಸುವುದು ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರಸ್ತೆಯ ಕೆಲವು ಭಾಗಗಳನ್ನು ಒತ್ತುವರಿ ಮಾಡಿರುವುದರಿಂದ ರಸ್ತೆ ಕಿರಿದಾಗಿದ್ದು, ಸರ್ವಿಸ್ ರಸ್ತೆಗಳ ಮೇಲೆ ವಾಹನಗಳ ಒತ್ತಡ ಹೆಚ್ಚಾಗಿದೆ.
ಏಕಮುಖ ಸಂಚಾರ, ಅಡ್ಡಾದಿಡ್ಡಿ ವಾಹನ ಸಂಚಾರ ಹಾಗೂ ಕಾಮಗಾರಿಯಿಂದ ಉಂಟಾಗಿರುವ ಅಸಮರ್ಪಕ ರಸ್ತೆ ವ್ಯವಸ್ಥೆ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಂದಾಪುರ, ಹಳೆ ಚಂದಾಪುರ ಹಾಗೂ ನೆರಳೂರು ಭಾಗಗಳಲ್ಲಿ ಪ್ರತಿನಿತ್ಯ ಬೆಳಗ್ಗೆಯಿಂದ ತಡರಾತ್ರಿವರೆಗೂ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಚಂದಾಪುರದ ಬಳಿ ಫ್ಲೈಓವರ್ ಇದ್ದರೂ ಅದರ ಮೇಲೆಯೂ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು ಐದಾರು ಕಿ.ಮೀ.ವರೆಗೆ ನಾನ್ಸ್ಟಾಪ್ ಟ್ರಾಫಿಕ್ ಉಂಟಾಗುತ್ತಿರುವುದರಿಂದ ಸ್ಥಳೀಯರು ಹಾಗೂ ಉದ್ಯೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ ರಾತ್ರಿ ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಅವರ ಕಾರು ಕೂಡ ಚಂದಾಪುರದ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿತ್ತು.
ಸುಮಾರು 50 ನಿಮಿಷಗಳ ಕಾಲ ಒಂದೇ ಜಾಗದಲ್ಲಿ ಕಾರು ನಿಂತಿತ್ತು ಎನ್ನಲಾಗಿದೆ. ಇದರಿಂದ ಹೆದ್ದಾರಿ ಕಾಮಗಾರಿ ಹಾಗೂ ಸಂಚಾರ ನಿರ್ವಹಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ಚರ್ಚೆ ನಡೆದಿದೆ.
ಇದೇ ವೇಳೆ, ಚಂದಾಪುರದಲ್ಲಿ ಕಳೆದ ರಾತ್ರಿ ಮಳೆ ಹಾಗೂ ರಸ್ತೆ ಕಾಮಗಾರಿಯಿಂದ ಮತ್ತೊಂದು ಅವಾಂತರ ಸಂಭವಿಸಿದೆ.
ಕಾಮಗಾರಿಗಾಗಿ ರಸ್ತೆ ಬದಿಯಲ್ಲಿ ತೆಗೆದಿದ್ದ ಹಳ್ಳಕ್ಕೆ ಕಾರೊಂದು ವಾಲಿದೆ. ಮಳೆ ನೀರಿನಿಂದಾಗಿ ಹಳ್ಳ ಸ್ಪಷ್ಟವಾಗಿ ಕಾಣದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಕಾರನ್ನು ಹೊರತೆಗೆಯಲು ಮಾಲೀಕರು ಹರಸಾಹಸಪಟ್ಟರು.
“ಒಂದೆಡೆ ಮಳೆ, ಮತ್ತೊಂದೆಡೆ ಹೆದ್ದಾರಿ ಕಾಮಗಾರಿ. ಪ್ರತಿನಿತ್ಯ ಚಂದಾಪುರ, ಅತ್ತಿಬೆಲೆ ಭಾಗದಲ್ಲಿ ಟ್ರಾಫಿಕ್ನಲ್ಲಿ ಸಿಲುಕಿ ಪರದಾಡುವಂತಾಗಿದೆ.
ಐದಾರು ಕಿ.ಮೀ. ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R