ಬೆಂಗಳೂರಿನಲ್ಲಿ ₹2,048 ಕೋಟಿ ಟ್ರಾಫಿಕ್ ದಂಡ ಬಾಕಿ; ವಸೂಲಿಗೆ ಕಠಿಣ ಕ್ರಮಕ್ಕೆ ಚಿಂತನೆ
ಬೆಂಗಳೂರಿನಲ್ಲಿ 3.72 ಕೋಟಿಗೂ ಅಧಿಕ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡ ಬಾಕಿ ಉಳಿದಿದ್ದು, ಒಟ್ಟು ₹2,048.56 ಕೋಟಿ ವಸೂಲಾಗಬೇಕಿದೆ. ದಂಡ ವಸೂಲಿಗೆ ಎಫ್ಸಿ ಹಾಗೂ ವಿಮೆ ನವೀಕರಣಕ್ಕೆ ನಿರ್ಬಂಧ ಸೇರಿದಂತೆ ಕಠಿಣ ಕ್ರಮಗಳ ಕುರಿತು ಇಲಾಖೆ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ₹2,048 ಕೋಟಿ ಟ್ರಾಫಿಕ್ ದಂಡ ಬಾಕಿ; ವಸೂಲಿಗೆ ಕಠಿಣ ಕ್ರಮಕ್ಕೆ ಚಿಂತನೆ


ಬೆಂಗಳೂರು, 06 ಅಕ್ಟೋಬರ್ (ಹಿ.ಸ.):

ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ನಿರೀಕ್ಷಿತ ಮಟ್ಟದಲ್ಲಿ ಆಗದೆ, ಕೋಟ್ಯಂತರ ರೂಪಾಯಿ ಬಾಕಿ ಉಳಿದಿದೆ.

2019ರಿಂದ 2026ರ ಆಗಸ್ಟ್ವರೆಗೆ ಕರ್ನಾಟಕದಲ್ಲಿ ದಾಖಲಾಗಿರುವ 8.16 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳ ಪೈಕಿ 5.53 ಕೋಟಿ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ₹3,006.70 ಕೋಟಿ ದಂಡ ಬಾಕಿಯಿದ್ದು, ರಾಜ್ಯದ ಒಟ್ಟು ಬಾಕಿ ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಅತಿ ಹೆಚ್ಚಾಗಿದೆ.

ನಗರದಲ್ಲಿ ದಾಖಲಾಗಿರುವ 5.85 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳ ಪೈಕಿ 3.72 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಪರಿಣಾಮವಾಗಿ ಬೆಂಗಳೂರಿನಲ್ಲಿ ವಸೂಲಾಗದೆ ಉಳಿದಿರುವ ದಂಡದ ಮೊತ್ತ ₹2,048.56 ಕೋಟಿಯಷ್ಟಿದೆ.ಬಾಕಿ ಇರುವ ಇ-ಚಲನ್ಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದು, ದಂಡ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಬಾಕಿ ದಂಡ ಹೊಂದಿರುವ ವಾಹನಗಳನ್ನು ವಶಕ್ಕೆ ಪಡೆಯುವುದು ಹಾಗೂ ಆನ್ಲೈನ್ ಸಾರಿಗೆ ಸಂಬಂಧಿತ ಸೇವೆಗಳನ್ನು ಸ್ಥಗಿತಗೊಳಿಸುವಂತಹ ಕ್ರಮಗಳ ಬಗ್ಗೆಯೂ ಕೋರ್ಟ್ ನಿರ್ದೇಶನ ನೀಡಿದೆ.

ಎಫ್ಸಿ ಪಡೆಯಲು ದಂಡ ಪಾವತಿ ಕಡ್ಡಾಯ?ಸಂಚಾರ ದಂಡ ಪಾವತಿಯನ್ನು ಕಡ್ಡಾಯಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ. ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯುವ ಮುನ್ನ ಬಾಕಿ ಇರುವ ಸಂಚಾರ ದಂಡ.

ಪಾವತಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಎಂ.ಎ. ಸಲೀಂ ತಿಳಿಸಿದ್ದಾರೆ

ಅದೇ ರೀತಿ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿರುವ ವಾಹನಗಳಿಗೆ ವಿಮೆ ನವೀಕರಣಕ್ಕೆ ಅವಕಾಶ ನೀಡದಂತೆ ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತರಲು ಇಲಾಖೆ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ವಿದ್ಯುತ್ ಬಿಲ್ಗೂ ಲಿಂಕ್ ಮಾಡುವ ಸಾಧ್ಯತೆದಂಡ ಪಾವತಿಗೆ ವಾಹನ ಸವಾರರನ್ನು ಉತ್ತೇಜಿಸಲು ಮತ್ತಷ್ಟು ಕ್ರಮಗಳನ್ನು ಜಾರಿಗೆ ತರಲು ಇಲಾಖೆ ಚಿಂತನೆ ನಡೆಸಿದೆ.

ಸಂಚಾರ ದಂಡವನ್ನು ವಿದ್ಯುತ್ ಬಿಲ್ಗೆ ಲಿಂಕ್ ಮಾಡುವ ಸಾಧ್ಯತೆಯ ಬಗ್ಗೆಯೂ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಈ ಆಯ್ಕೆಯನ್ನು ಪರಿಶೀಲಿಸಲಾಗುವುದು ಎಂದು ಸಲೀಂ ತಿಳಿಸಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸರ ಹಿರಿಯ ಅಧಿಕಾರಿಗಳ ಪ್ರಕಾರ, ಸಂಪರ್ಕರಹಿತ ಜಾರಿ ವ್ಯವಸ್ಥೆ ಹಾಗೂ ವ್ಯವಸ್ಥೆಯಲ್ಲಿನ ಕೆಲವು ಲೋಪಗಳು ದಂಡ ವಸೂಲಿ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ.

ಶೇ 80ಕ್ಕೂ ಅಧಿಕ ಪ್ರಕರಣಗಳು ಸ್ವಯಂಚಾಲಿತ ಕಣ್ಗಾವಲು ಕ್ಯಾಮೆರಾಗಳ ಮೂಲಕ ದಾಖಲಾಗುತ್ತಿವೆ. ವಾಹನ ಚಾಲಕರನ್ನು ಸ್ಥಳದಲ್ಲೇ ನಿಲ್ಲಿಸದ ಕಾರಣ ಕೆಲವರು ಎಸ್ಎಂಎಸ್ ಮೂಲಕ ಬರುವ ನೋಟಿಸ್ಗಳನ್ನು ನಿರ್ಲಕ್ಷಿಸುತ್ತಿದ್ದಾರೆ.

ಇದಲ್ಲದೆ, ವಾಹನ ಮಾಲೀಕರು ವಿಳಾಸ ಬದಲಾಯಿಸಿದರೂ ಅಥವಾ ವಾಹನವನ್ನು ಮಾರಾಟ ಮಾಡಿದರೂ ವಾಹನ್ ಡೇಟಾಬೇಸ್ನಲ್ಲಿ ವಿವರಗಳನ್ನು ನವೀಕರಿಸದಿರುವುದರಿಂದ ಹಲವು ನೋಟಿಸ್ಗಳು ಸಂಬಂಧಪಟ್ಟವರಿಗೆ ತಲುಪುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪದೇಪದೇ ಶೇ 50ರಷ್ಟು ದಂಡ ರಿಯಾಯಿತಿ ನೀಡಿರುವುದರಿಂದ, ಮುಂದೆಯೂ ಇಂತಹ ರಿಯಾಯಿತಿ ಯೋಜನೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕೆಲವರು ದಂಡ ಪಾವತಿಸದೆ ಕಾಯುತ್ತಿರುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande