
ಬೆಂಗಳೂರು, 06 ಅಕ್ಟೋಬರ್ (ಹಿ.ಸ.):
ನಗರದ ಔಟರ್ ರಿಂಗ್ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗುಂಡಿಯೊಂದನ್ನು ಡಾಂಬರು ಹಾಕಿ ದುರಸ್ತಿ ಮಾಡುವ ಬದಲು ಮಣ್ಣು ತುಂಬಿ ಮುಚ್ಚಿರುವ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗುಂಡಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಬಿಎ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳು ಎದ್ದಿವೆ.ಮಳೆ ಹಾಗೂ ವಾಹನಗಳ ಸಂಚಾರದಿಂದ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು,
ಔಟರ್ ರಿಂಗ್ ರಸ್ತೆಯ ಹಲವು ಭಾಗಗಳಲ್ಲೂ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇತ್ತೀಚಿನ ಮಳೆಯಿಂದ ORR ಸೇರಿದಂತೆ ನಗರದ ವಿವಿಧೆಡೆ ಜಲಾವೃತ ಮತ್ತು ಸಂಚಾರ ದಟ್ಟಣೆ ಉಂಟಾಗಿ ತೊಂದರೆಯಾಗಿದೆ.
ಈ ನಡುವೆ ವೈರಲ್ ಆಗಿರುವ ಗುಂಡಿಯ ಚಿತ್ರ/ವಿಡಿಯೊದಲ್ಲಿ ಜಿಬಿಎ ಸಿಬ್ಬಂದಿ ಗುಂಡಿಗೆ ಮಣ್ಣು ತುಂಬಿರುವುದು ಕಂಡುಬಂದಿದೆ. ಇದಕ್ಕೆ ಸಾರ್ವಜನಿಕರು, “ಬೆಂಗಳೂರಿನ ಪಾಲಿಕೆಗೆ ಒಂದು ಹತ್ತು ಕೆಜಿ ಡಾಂಬಾರು ಹಾಕುವಷ್ಟು ಗತಿಯಿಲ್ಲವೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ರಸ್ತೆ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಕ್ಕಿಂತ ಗುಣಮಟ್ಟದ ಡಾಂಬರೀಕರಣ ಹಾಗೂ ಶಾಶ್ವತ ದುರಸ್ತಿ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಮಳೆ ಬಂದಾಗ ಮತ್ತೆ ಗುಂಡಿಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಯ ಗುಣಮಟ್ಟ ಮತ್ತು ಒಳಚರಂಡಿ ವ್ಯವಸ್ಥೆಯ ಮೇಲೂ ಗಮನಹರಿಸಬೇಕಿದೆ.
“ಪ್ರಮುಖ ಸಂಚಾರ ಮಾರ್ಗದಲ್ಲಿರುವ ಗುಂಡಿಗೆ ಮಣ್ಣು ತುಂಬಿ ಮುಚ್ಚುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ.
ಕನಿಷ್ಠ ತಾತ್ಕಾಲಿಕವಾಗಿಯಾದರೂ ಡಾಂಬರು ಹಾಕಿ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಮಳೆ ಬಂದರೆ ಮಣ್ಣು ಕೊಚ್ಚಿಹೋಗಿ ಗುಂಡಿ ಮತ್ತಷ್ಟು ಅಪಾಯಕಾರಿಯಾಗುವ ಸಾಧ್ಯತೆ ಇದೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R