
ಬೆಂಗಳೂರು, 06 ಅಕ್ಟೋಬರ್ (ಹಿ.ಸ.):
ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿನಲ್ಲಿ ರಸ್ತೆಗೆ ಬರುವ ಬಿಡಾಡಿ ದನ ಹಾಗೂ ಇತರೆ ಜಾನುವಾರುಗಳಿಂದ ಉಂಟಾಗುವ ಸಮಸ್ಯೆ ನಿಯಂತ್ರಣಕ್ಕೆ ಪೂರ್ವ ಪಾಲಿಕೆ ಹೊಸ ಕ್ರಮ ಕೈಗೊಂಡಿದೆ.
ಸಾರ್ವಜನಿಕ ರಸ್ತೆಗಳಲ್ಲಿ ಅಡ್ಡಾಡುವ ದನ, ಕುರಿ, ಕುದುರೆ, ಹಂದಿ ಸೇರಿದಂತೆ ವಿವಿಧ ಜಾನುವಾರುಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲು ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆ ಹೊಂದಿರುವ ವಿಶೇಷ ಟ್ರಕ್ ಅನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಪೂರ್ವ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ವಾಹನಕ್ಕೆ ಚಾಲನೆ ನೀಡಿದರು. ಪಾಲಿಕೆ ಸಿಬ್ಬಂದಿ ಈ ವಾಹನದ ಮೂಲಕ ರಸ್ತೆಗಳಲ್ಲಿ ಅಡ್ಡಾಡುವ ಜಾನುವಾರುಗಳನ್ನು ಹಿಡಿದು ಸುರಕ್ಷಿತ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಿದ್ದಾರೆ.
ವಶಕ್ಕೆ ಪಡೆದ ಜಾನುವಾರುಗಳನ್ನು ಮೂರು ದಿನಗಳೊಳಗೆ ಮಾಲೀಕರು ಬಿಡಿಸಿಕೊಂಡು ಹೋದರೆ ₹600 ದಂಡ ವಿಧಿಸಲಾಗುತ್ತದೆ.
ಮೂರು ದಿನಗಳ ಬಳಿಕ ಪ್ರತಿ ಹೆಚ್ಚುವರಿ ದಿನಕ್ಕೆ ₹300 ದಂಡ ಪಾವತಿಸಬೇಕಾಗುತ್ತದೆ. ಕರುವಿಗೆ ಮೂರು ದಿನಕ್ಕೆ ₹300 ಹಾಗೂ ನಂತರದ ಪ್ರತಿ ದಿನಕ್ಕೆ ₹200 ದಂಡ ವಿಧಿಸಲಾಗುತ್ತದೆ ಎಂದು ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದ್ದಾರೆ.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದನದ ದೊಡ್ಡಿ ನಿರ್ಮಾಣವಾಗುವವರೆಗೆ ವಶಕ್ಕೆ ಪಡೆದ ಜಾನುವಾರುಗಳನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ದನದ ದೊಡ್ಡಿಗೆ ಸ್ಥಳಾಂತರಿಸಲಾಗುತ್ತದೆ.
ಮಾಲೀಕರು ಇಲ್ಲದ ಜಾನುವಾರುಗಳನ್ನು ನಿಯಮಾನುಸಾರ ಗೋಶಾಲೆಗಳಿಗೆ ಹಸ್ತಾಂತರಿಸಲಾಗುವುದು ಎಂದು ಪಾಲಿಕೆ ತಿಳಿಸಿದೆ.
ರಸ್ತೆಯ ಮಧ್ಯೆ ಜಾನುವಾರುಗಳು ನಿಂತಿರುವುದು, ಮಲಗಿರುವುದು, ಏಕಾಏಕಿ ರಸ್ತೆಗೆ ನುಗ್ಗುವುದು ಹಾಗೂ ಅವುಗಳ ನಡುವಿನ ಗುದ್ದಾಟದಿಂದ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬಿಡಾಡಿ ಜಾನುವಾರುಗಳನ್ನು ನಿಯಂತ್ರಿಸುವ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಸುಧಾಕರ್ ಹೇಳಿದ್ದಾರೆ.
ಬಿಡಾಡಿ ಜಾನುವಾರುಗಳ ನಿಯಂತ್ರಣ ಕಾರ್ಯಾಚರಣೆಯನ್ನು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಸಲಾಗುತ್ತದೆ ಎಂದು ಪೂರ್ವ ಪಾಲಿಕೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R