
ಶ್ರೀರಂಗಪಟ್ಟಣ, 06 ಅಕ್ಟೋಬರ್ (ಹಿ.ಸ.):
ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈ ಬಾರಿ ದಸರಾ ಮಹೋತ್ಸವವನ್ನು ಖ್ಯಾತ ನಟ ರವಿಚಂದ್ರನ್ ಉದ್ಘಾಟಿಸಲಿದ್ದಾರೆ.
ಅಕ್ಟೋಬರ್ 15ರಂದು ನಡೆಯಲಿರುವ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಉದ್ಘಾಟನೆಗೆ ಜಿಲ್ಲಾಡಳಿತದ ವತಿಯಿಂದ ನಟ ರವಿಚಂದ್ರನ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.
ಬೆಂಗಳೂರಿನಲ್ಲಿರುವ ರವಿಚಂದ್ರನ್ ಅವರ ನಿವಾಸಕ್ಕೆ ತೆರಳಿದ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಹಾಗೂ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ದಸರಾ ಮಹೋತ್ಸವದ ಆಹ್ವಾನ ಪತ್ರಿಕೆ ನೀಡಿ ಆಮಂತ್ರಿಸಿದರು.
ಈ ಸಂದರ್ಭದಲ್ಲಿ ನಟ ರವಿಚಂದ್ರನ್ ಅವರಿಗೆ ಹೂಗುಚ್ಛ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ದಸರಾ ಮಹೋತ್ಸವದ ಉದ್ಘಾಟನೆಗೆ ಆಗಮಿಸುವಂತೆ ಜಿಲ್ಲಾಡಳಿತ ಹಾಗೂ ಶಾಸಕರು ಆತ್ಮೀಯವಾಗಿ ಆಹ್ವಾನಿಸಿದರು.
ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ಐತಿಹಾಸಿಕ ಶ್ರೀರಂಗಪಟ್ಟಣದ ದಸರಾ ಮಹೋತ್ಸವವನ್ನು ಈ ಬಾರಿ ವಿಶೇಷವಾಗಿ ಆಯೋಜಿಸಲಾಗುತ್ತಿದ್ದು, ಖ್ಯಾತ ನಟ ರವಿಚಂದ್ರನ್ ಅವರು ಉದ್ಘಾಟಿಸಲಿರುವುದು ಸಂತಸದ ಸಂಗತಿಯಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಅಕ್ಟೋಬರ್ 15ರಂದು ನಡೆಯಲಿರುವ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R