
ಕೋಲಾರ 06 ಅಕ್ಟೋಬರ್ (ಹಿ.ಸ) : ಎತ್ತಿನಹೊಳೆ ಯೋಜನೆಯ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ. ಇದೊಂದು ಪೈಪ್ಲೈನ್ ಯೋಜನೆಯಾಗಿದೆ. ಇದುವರೆಗೂ ಸರ್ಕಾರ ವೆಚ್ಚ ಮಾಡಿರುವ ಹಣ ಪೈಪ್ಲೈನ್ನಲ್ಲಿ ಹರಿದು ಹೋಗಿದೆ. ಈ ಹಿಂದೆ ಹಳ್ಳಿಗಳಲ್ಲಿ ಮನೆ ಬಾಗಿಲ ಮೇಲೆ 'ನಾಳೆ ಬಾ' ಎಂದು ಬರೆಯುತ್ತಿದ್ದ ರೀತಿಯಲ್ಲಿ ಎತ್ತಿನಹೊಳೆ ಯೋಜನೆಗೆ 'ನಾಳೆ ಬಾ' ಯೋಜನೆ ಎಂದು ಕರೆಯಬಹುದು. ಇನ್ನೊಂದು ವರ್ಷದಲ್ಲಿ ಚುನಾವಣೆ ಬರುತ್ತದೆ ನೋಡೋಣ. ಅಷ್ಟರಲ್ಲಿ ಯಾವ ಮಟ್ಟಕ್ಕೆ ಈ ಜಿಲ್ಲೆಯ ಜನರ ಬೇಡಿಕೆಗಳನ್ನು ಈಡೆರಿಸುತ್ತಾರೆ ಎಂದು ಕಾದು ನೋಡೋಣ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ನಡೆಯನ್ನು ಟೀಕಿಸಿದರು.
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಮಂಗಳವಾರ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮಗಳ ಜತೆ ಮಾತನಾಡಿದರು. ಯೋಜನೆಯ ಪೈಪ್ಲೈನ್ ಹಾಕುವುದನ್ನು ಯಾರು ಬೇಕಾದರೂ ಮಾಡಬಹುದು. ಆದರೆ ನೀರು ಕೊಡಬೇಕಲ್ಲ? ನೀರು ಕೊಡಿಸುವುದಕ್ಕೆ ವ್ಯವಸ್ಥೆ ಮಾಡದೆ ಕೇವಲ ಪೈಪ್ಲೈನ್ ಹಾಕಿದರೆ ಅದು ದುಡ್ಡು ಹೊಡೆಯುವ ಕೆಲಸವಾಗುತ್ತದೆ ಅಷ್ಟೇ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ತರುತ್ತೇವೆ ಎಂದು ಹೇಳಿ ಆ ಭಾಗದ ಜನತೆಗೆ ದ್ರೋಹ ಬಗೆಯಬೇಡಿ, ದುಡ್ಡು ಹೊಡೆಯುವ ಕಾರ್ಯಕ್ರಮ ಮಾಡಬೇಡಿ ಎಂದರು.
ಈ ಹಿಂದೆಯೇ ನಾನು ಹೇಳಿದ್ದ ಮಾತಿಗೆ ಈಗಲೂ ಬದ್ಧನಿದ್ದೇನೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಕೊಡುವುದು ಈ ಸರಕಾರಕ್ಕೆ ಸಾಧ್ಯವಿಲ್ಲ. ಇವತ್ತು ನೀರು ಕೊಡುತ್ತೇವೆ, ನಾಳೆ ಕೊಡುತ್ತೇವೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಈ ಜಿಲ್ಲೆಗಳ ಪಾಲಿಗೆ ಎತ್ತಿನಹೊಳೆ ‘ನಾಳೆ ಬಾ' ಅನ್ನುವ ಯೋಜನೆಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ಆ ಜಿಲ್ಲೆಗಳ ಜನರ ಶ್ರಮ ರಾಜ್ಯಕ್ಕೆ ದೊಡ್ಡ ಕೊಡುಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರಿಲ್ಲದಿದ್ದರೂ ತಮ್ಮ ಕಾಯಕದಿಂದ ರಾಜ್ಯದ ಆರ್ಥಿಕತೆಗೆ ಅವರು ಶಕ್ತಿ ತುಂಬಿದ್ದಾರೆ. ನಾನು ೨೦೧೩-೧೪ರಲ್ಲಿ ಆದಿಚುಂಚನಗಿರಿ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ದಿನವೇ ನಾನು ಕೋಲಾರದಲ್ಲಿ ಇದ್ದೆ. ಆವತ್ತೇ ನಾನು ಹೇಳಿದ್ದೆ. ಇವರಿಂದ ನೀರು ಕೊಡಲು ಆಗುವುದಿಲ್ಲ ಎಂದು. ಶಂಕುಸ್ಥಾಪನೆ ಮಾಡಿದ್ದ ಅಂದಿನ ಮುಖ್ಯಮಂತ್ರಿ ಒಂದೆರಡು ವರ್ಷಗಳಲ್ಲಿ ಕೋಲಾರದ ಕೊನೆ ಅಂಚಿನವರೆಗೂ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದ್ದರು ಎಂಬ ಮಾತನ್ನು ಕೇಂದ್ರ ಸಚಿವರು ಕಾಂಗ್ರೆಸ್ ಸರಕಾರಕ್ಕೆ ನೆನಪಿಸಿದರು.
ಸಿದ್ದರಾಮಯ್ಯ ಅವರು ೧-೨ ವರ್ಷದಲ್ಲಿ ನೀರು ಹರಿಸುತ್ತೇವೆ ಎಂದಿದ್ದರು. ಅದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದ ನನ್ನ ಮಾತನ್ನು ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಘುವಾಗಿ ತಳ್ಳಿಹಾಕಿದ್ದರು. ಅವರು ಮಾತು ಕೊಟ್ಟು ೧೨-೧೩ ವರ್ಷ ಕಳೆದಿದೆ. ಆದರೆ ಯೋಜನೆ ಹಾಸನ ದಾಟಿ ಮುಂದೆ ಬರಲಿಲ್ಲ. ಜಲಾಶಯ ಎಲ್ಲಿ ನಿರ್ಮಾಣ ಮಾಡ್ತಿದ್ದಾರೆ?ದೇವರಾಯನದುರ್ಗದ ಬಳಿ ೧೦ ಟಿಎಂಸಿ ನೀರು ಸಂಗ್ರಹಕ್ಕೆ ಜಲಾಶಯ ಕಟ್ಟುತ್ತೇವೆ ಎಂದರು. ಆಮೇಲೆ ಅದು ೫ ಟಿಎಂಸಿ ಮಟ್ಟಕ್ಕೆ ಬಂತು. ಈಗ ೨ ಟಿಎಂಸಿಗೆ ಬಂದಿದೆ. ಇವತ್ತಿನವರೆಗೂ ಈ ಕುರಿತು ನಿಖರ ತೀರ್ಮಾನ ಮಾಡಿಲ್ಲ. ಕಳೆದ ಮೂರು ವರ್ಷಗಳಿಂದ ಮುಂದಿನ ಜೂನ್ಗೆ ನೀರು ಹರಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ ಎಂದು ಸಚಿವ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ೨ನೇ ಬಾರಿ ಮುಖ್ಯಮಂತ್ರಿಯಾದಾಗ ಪ್ರಮುಖವಾಗಿ ಮುನ್ನೆಲೆಗೆ ಬಂದಿದ್ದು ಅಧಿಕಾರ ಹಂಚಿಕೆ ವಿಚಾರ ಮಾತ್ರ. ಎರಡೂವರೆ ವರ್ಷದ ಅವಧಿ, ಯಾವಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೆ, ಯಾವಾಗ ಇನ್ನೊಬ್ಬರು ಬಂದು ಕೂರುತ್ತಾರೆ ಎನ್ನುವುದೇ ಆಯಿತು. ಯಾರು ಮುಂದಿನ ಸಿಎಂ ಆಗ್ತಾರೆ ಎನ್ನುವ ಚರ್ಚೆಯೇ ಮುನ್ನೆಲೆಗೆ ಬಂತು. ಇದರ ಜತೆಗೆ ಗ್ಯಾರಂಟಿ ಯೋಜನೆಗಳನ್ನು ಹೇಳಿಕೊಂಡು ಬಂದಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದು ನಡೆದಿದ್ದೆವೆ ಅಂತಾ ಹೇಳಿಕೊಂಡು ಬಂದಿದ್ದಾರೆ. ಗ್ಯಾರಂಟಿಯಿAದ ರಾಜ್ಯದ ಜನರ ಅರ್ಥಿಕ ಶಕ್ತಿ ವೃದ್ದಿ ಮಾಡಿದ್ದೀವಿ ಎಂದು ಹೇಳಿದ್ದಾರೆ.
ಹಾಗಿದ್ದರೆ ಬರದಿಂದ ಕಂಗೆಟ್ಟಿರುವ ಜನರು ಯಾಕೆ ಕಣ್ಣೀರು ಹಾಕುತ್ತಿದ್ದಾರೆ. ಮೂರು ದಿನಗಳಿಂದ ಕೇಂದ್ರ ತಂಡ ಬಂದು ರಾಜ್ಯ ಪ್ರವಾಸ ಮಾಡುತ್ತಿದೆ, ಅವರ ಎದುರು ಹಳ್ಳಿಗಳಲ್ಲಿ ರೈತರು ಕಣ್ಣಿರು ಹಾಕ್ತಿದಾರೆ, ದಿನಗೂಲಿ ಸಿಕ್ತಿಲ್ಲ, ಹಳ್ಳಗಳಿಗೆ ಜನ ಮನೆಗೆ ಬೀಗ ಹಾಕಿ ಗುಳೆ ಹೋಗ್ತಿದ್ದಾರೆ. ಈ ಸರಕಾರ ನೋಡಿದರೆ ₹೨,೫೦೦ ಘೋಷಣೆ ಮಾಡಿ ಕೈತೊಳೆದುಕೊಂಡಿದೆ. ಎಷ್ಟು ಜನ ರೈತರಿಗೆ ಈ ಹಣ ತಲುಪಿದೆ ಎಂಬುದು ಗೊತ್ತಿಲ್ಲ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನಾನೇನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಈ ಮುಖ್ಯಮಂತ್ರಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ವಾಸ್ತವ ಸ್ಥಿತಿಯೇ ಬೇರೆ ಇದೆ. ಮುಖ್ಯಮಂತ್ರಿ ವಿಷನ್ ೨೦೩೭, ವಿಷನ್ ೨೦೪೭ ಎಂದೆಲ್ಲ ಹೇಳುತ್ತಿದ್ದಾರೆ. ಅದಕ್ಕೆಲ್ಲ ಹಣ ಎಲ್ಲಿಂದ ತರುತ್ತಾರೆ? ಈಗ ಬೇರೆ ಇಂಟಿಗ್ರೇಟೆಡ್ ಟೌನ್ಷಿಪ್ಗಳನ್ನು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರ ಭೂಮಿಗೆ ಬೆಲೆ ತಂದುಕೊಳ್ಳುವುದು ಅದರ ಹಿಂದಿನ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಹಾಲಿನ ದರ ಏರಿಕೆಗೆ ನನ್ನ ವಿರೋಧವಿಲ್ಲ ಎಂದ ಸಚಿವ ಕುಮಾರಸ್ವಾಮಿ ಅವರು; ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು. ರೈತರಿಗೆ ಕೊಡುವ ₹೫ ಪ್ರೋತ್ಸಾಹ ಧನವನ್ನು ಹೆಚ್ಚಿಸಿ ೬ನೇ ಗ್ಯಾರಂಟಿ ಎಂದು ಕೊಡಿ. ಸಾಧ್ಯವಾದರೆ ₹೫ ಅಥವಾ ₹೧೦ ಮೊತ್ತವನ್ನು ರೈತನಿಗೆ ಪ್ರೋತ್ಸಾಹ ಧನದ ರೂಪದಲ್ಲಿ ಕೊಡಿ. ನೀವು ಒಂದು ಕಡೆ ಹಾಲಿನ ದರ ಹೆಚ್ಚಿಸಿ ಅದರ ಭಾರವನ್ನು ಗ್ರಾಹಕರ ಮೇಲೆ ಹಾಕಬೇಡಿ ಎಂದು ಕೇಂದ್ರ ಸಚಿವರು ಸಲಹೆ ನೀಡಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಸರ್ಕಾರಿ ಜಮೀನು ಪಡೆದ ವಿಚಾರದಲ್ಲಿ ಹೈಕೋರ್ಟ್ ಆದೇಶದ ನಂತರವೂ ಲೋಕಾಯುಕ್ತ ತನಿಖೆ ಮಾಡಿಸಲು ಇವರಿಗೆ ಧೈರ್ಯವಿಲ್ಲ ಎಂದು ಪ್ರಶ್ನಿಸಿದ ಸಚಿವರು; ಬುದ್ಧ, ಸಿದ್ದಾರ್ಥ, ಅಂಬೇಡ್ಕರ್ ಹೆಸರು ಹೇಳಿಕೊಂಡು ತಮ್ಮ ಕುಟುಂಬದ ಹಿತಾಸಕ್ತಿ ನೋಡಿಕೊಳ್ಳುತ್ತಿದ್ದಾರೆ. ಮೊದಲು ತಮ್ಮ ಮನೆಯ ದೋಷಗಳನ್ನು ಸರಿಪಡಿಸಿಕೊಳ್ಳಲಿ, ಆಮೇಲೆ ನಮ್ಮ ಕುಟುಂಬದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ಕೊಟ್ಟರು.
ಮೈತ್ರಿಯ ಸ್ಥಳೀಯ ಮಟ್ಟದಲ್ಲಿ ಸಣ್ಣಪುಟ್ಟ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಸಹಜ. ರಾಜಕಾರಣಿಗಳು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸುವುದುಂಟು. ವಿಜಯೇಂದ್ರ ಅವರು ಹೇಳಿದಂತೆ, ಈಗಲೇ ಸೀಟು ಹೊಂದಾಣಿಕೆ ಮತ್ತು ಚರ್ಚೆ ನಡೆಸುವುದು ಒಳ್ಳೆಯ ಬೆಳವಣಿಗೆ. ಅಂತಿಮ ನಿರ್ಧಾರವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ. ಕೋಲಾರ ಜಿಲ್ಲೆಯಲ್ಲಿ ಮೈತ್ರಿ ನಡೆಯಲ್ಲ ಎಂದು ಹೇಳಿದವರು ಯಾರು? ನಮ್ಮಿಂದಲೇ ರಾಜಕೀಯ ಜೀವನ ಆರಂಭಿಸಿ, ನಮಗೇ ಟೋಪಿ ಹಾಕಿ ಹೋದವರು ಹೇಳಿದ್ದು ಅಲ್ಲವೇ? ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದರು ಅವರು.
ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು, ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ ಮುಂತಾದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್