ಆಸಿಡ್ ದಾಳಿಯಂತಹ ಅಮಾನುಷ ದೌರ್ಜನ್ಯಗಳನ್ನು ತಡೆಯಲು ಜಿಲ್ಲಾಧಿಕಾರಿ ಕರೆ
ಆಸಿಡ್ ದಾಳಿಯಂತಹ ಅಮಾನುಷ ದೌರ್ಜನ್ಯಗಳನ್ನು ತಡೆಯಲು ಜಿಲ್ಲಾಧಿಕಾರಿ ಕರೆ
ಆಸಿಡ್ ದಾಳಿ ಮತ್ತು ಸಂತ್ರಸ್ಥರಿಗೆ ಕಾನೂನು ಸೇವೆಗಳ ಬಗ್ಗೆ ನಡೆದ ಕಾರ್ಯಾಗಾರವನ್ನು ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ ಉದ್ಘಾಟಿಸಿದರು.


ಕೋಲಾರ, 06 ಅಕ್ಟೋಬರ್ (ಹಿ.ಸ) : ಸಮಾಜದಲ್ಲಿ ದ್ವೇಷ, ಅಸೂಯೆ ಮತ್ತು ಅಹಂಕಾರದ ಹಿನ್ನೆಲೆಯಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಆಸಿಡ್ ದಾಳಿಯಂತಹ ಅಮಾನುಷ ಕೃತ್ಯಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಪಾಲನೆ ಹಾಗೂ ಸಮಾಜದಲ್ಲಿ ವ್ಯಾಪಕ ಜಾಗೃತಿಯ ಅಗತ್ಯವಿದೆ. ಆಸಿಡ್ ದಾಳಿ ಸಂತ್ರಸ್ಥರಿಗೆ ರಕ್ಷಣೆಯ ಜೊತೆಗೆ ಕಾನೂನು ಸೇವೆ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೋಲಾರದಲ್ಲಿ ಆಸಿಡ್ ದಾಳಿ ಸಂತ್ರಸ್ತರಿಗೆ ಕಾನೂನು ಸೇವೆಗಳು' ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ, ಪ್ರೀತಿ ನಿರಾಕರಿಸಿದಂತಹ ಸಂದರ್ಭಗಳಲ್ಲಿ ಹೆಣ್ಣುಮಕ್ಕಳ ಮೇಲೆ ಆಸಿಡ್ ಎರಚುವಂತಹ ವಿಕೃತ ಮನಸ್ಥಿತಿಗಳು ಹೆಚ್ಚಾಗುತ್ತಿವೆ. ಇಂತಹ ಪ್ರಕರಣಗಳನ್ನು ಮಟ್ಟಹಾಕಲು ಆಡಳಿತ ವ್ಯವಸ್ಥೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಇಂತಹ ಸಂತ್ರಸ್ಥರು ತಮ್ಮ ಜೀವನ ಕಟ್ಟಿಕೊಳ್ಳಲು ಸಮಾಜ ಅನುಕೂಲ ಮಾಡಿಕೊಳ್ಳಬೇಕು. ಅವರಿಗೆ ಕಾನೂನಿನ ಅಡಿಯಲ್ಲಿ ರಕ್ಷಣೆ ಸಹ ಒದಗಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ಬಿ. ಪ್ರಸಾದ್ ಮಾತನಾಡಿ ಭಾರತೀಯ ಸಂವಿಧಾನದ ೧೪ನೇ ವಿಧಿಯು ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕನ್ನು ನೀಡಿದೆ. ೨೧ನೇ ವಿಧಿಯು ಗೌರವಯುತವಾಗಿ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಸುಪ್ರೀಂ ಕೋರ್ಟ್ನ ಮಹತ್ವದ 'ಲಕ್ಷ್ಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ' ಪ್ರಕರಣದ ತೀರ್ಪಿನ ಅನ್ವಯ ಆಸಿಡ್ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ. ಅಂಗಡಿಗಳಲ್ಲಿ ಅನಧಿಕೃತವಾಗಿ ಆಸಿಡ್ ಮಾರಾಟ ಮಾಡುವಂತಿಲ್ಲ. ಖರೀದಿಸುವವರ ಗುರುತಿನ ಚೀಟಿ ಪಡೆಯುವುದು ಕಡ್ಡಾಯ ಹಾಗೂ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ತರಿಗೆ ತಕ್ಷಣದ ಹಾಗೂ ಸಂಪೂರ್ಣ ಉಚಿತ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪುನರ್ವಸತಿ ಹಾಗೂ ಕನಿಷ್ಠ ೩ ಲಕ್ಷ ರೂ.ಗಳ ಪರಿಹಾರ ಒದಗಿಸುವ ಅವಕಾಶಗಳಿವೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್. ಶ್ರೀನಿವಾಸ್ ಮಾತನಾಡಿ ಯಾವುದೇ ಕಾನೂನಿನ ಅಂತಿಮ ಉದ್ದೇಶ ಸಮಾಜದ ಕಲ್ಯಾಣ ಮತ್ತು ರಕ್ಷಣೆಯಾಗಿದೆ. ಆಸಿಡ್ ದಾಳಿಯಂತಹ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ವಕೀಲರ ಸಂಘ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸಿದ್ಧವಿದ್ದು, ಸಂತ್ರಸ್ತರು ಯಾವುದೇ ಆತಂಕವಿಲ್ಲದೆ ಉಚಿತ ಕಾನೂನು ನೆರವನ್ನು ಪಡೆದುಕೊಳ್ಳಬಹುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ, ಕೋಲಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾರಾಯಣ ಸ್ವಾಮಿ, ಪೊಲೀಸ್ ಇಲಾಖೆಯ ಅಧಿಕಾರಿ ಲೋಕೇಶ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande