



ಬಳ್ಳಾರಿ, 06 ಅಕ್ಟೋಬರ್ (ಹಿ.ಸ.)
ಸರ್ಕಾರಿ ನೌಕರರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಸಾರ್ವಜನಿಕರಿಗೆ ಚುರುಕಾಗಿ ಸೇವೆ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ನೌಕರರ ಆರೋಗ್ಯ ಕಾಪಾಡುವುದೇ ಪ್ರಮುಖ ಧ್ಯೇಯವಾಗಿದೆ ಎಂದು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಹೇಳಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ನೌಕರರ ಹಿತದೃಷ್ಟಿಯಿಂದ ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ನೌಕರನು ತನ್ನ ಕುಟುಂಬದ ಮುಖ್ಯ ಆಧಾರಸ್ತಂಭವಾಗಿರುತ್ತಾನೆ. ಕರ್ತವ್ಯದ ಒತ್ತಡದಲ್ಲಿ ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಪಡೆಯದಿದ್ದರೆ ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗಾಗಿ ನೌಕರರ ಕಲ್ಯಾಣವೇ ಈ ಆರೋಗ್ಯ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ನೌಕರರಲ್ಲಿ ಹೃದಯಾಘಾತ, ರಕ್ತದೊತ್ತಡ ಹಾಗೂ ಪಾರ್ಶ್ವವಾಯು ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಗಂಭೀರ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನೌಕರರ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಅವರು ಸಾರ್ವಜನಿಕರಿಗೆ ಉತ್ಸಾಹದಿಂದ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದರು.
ಆರೋಗ್ಯ ಶಿಬಿರದ ಜೊತೆಗೆ ಪಿಡಿಒ ಸಂಘದ ವತಿಯಿಂದ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದ್ದು, ಸಂಗ್ರಹವಾದ ರಕ್ತವನ್ನು ನೇರವಾಗಿ ಜಿಲ್ಲಾ ಆಸ್ಪತ್ರೆ ಅಥವಾ ಬಿಎಂಸಿಆರ್ಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
*17 ವಿಶೇಷ ಕೌಂಟರ್ಗಳ ಮೂಲಕ ಸಂಪೂರ್ಣ ತಪಾಸಣೆ:*
ಆರೋಗ್ಯ ಇಲಾಖೆಯ ವತಿಯಿಂದ ಶಿಬಿರದಲ್ಲಿ ಒಟ್ಟು 17 ಪ್ರತ್ಯೇಕ ತಪಾಸಣಾ ಕೌಂಟರ್ಗಳನ್ನು ಸ್ಥಾಪಿಸಲಾಗಿತ್ತು. ಮನೋವೈದ್ಯಕೀಯ, ಚರ್ಮರೋಗ, ಇಸಿಜಿ, ಎಕ್ಸ್-ರೇ, ಕ್ಷಯರೋಗ ತಪಾಸಣೆ ಸೇರಿದಂತೆ ತಲೆಯಿಂದ ಕಾಲಿನವರೆಗಿನ ಸಂಪೂರ್ಣ ದೈಹಿಕ ತಪಾಸಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಅದೇರೀತಿಯಾಗಿ ಮಾನಸಿಕ ಮತ್ತು ದೈಹಿಕ ಸ್ವಾಸ್ಥö್ಯಕ್ಕಾಗಿ ಆಯುಷ್ ಇಲಾಖೆಯ ವತಿಯಿಂದ ನ್ಯಾಚುರೋಪತಿ ಸೇರಿದಂತೆ ಪರ್ಯಾಯ ಚಿಕಿತ್ಸಾ ಸೌಲಭ್ಯಗಳನ್ನು ಸಹ ಒದಗಿಸಲಾಯಿತು.
*ಆರೋಗ್ಯ ಕೌಂಟರ್ಗಳನ್ನು ಪರಿಶೀಲಿಸಿ ತಪಾಸಣೆ ಮಾಡಿಸಿಕೊಂಡ ಜಿಪಂ ಸಿಇಒ*
ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು, ವಿವಿಧ ತಪಾಸಣಾ ಕೌಂಟರ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವ್ಯವಸ್ಥೆಗಳನ್ನು ಖುದ್ದಾಗಿ ವೀಕ್ಷಿಸಿದ ಅವರು, ಅಧಿಕಾರಿ-ಸಿಬ್ಬಂದಿಗೆ ಮಾದರಿಯಾಗುವಂತೆ ಸ್ವತಃ ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಅಂಶ ಪರೀಕ್ಷೆ ಸೇರಿದಂತೆ ಪ್ರಾಥಮಿಕ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡರು. ಬಳಿಕ ಸಿಬ್ಬಂದಿಯಿAದ ಮಾಹಿತಿ ಪಡೆದು, ಯಾವುದೇ ತೊಂದರೆಯಾಗದAತೆ ಉತ್ತಮ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಆಲಕಾನಂದ ಡಿ ಮಳಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಇಂದ್ರಾಣಿ ವಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಹನುಮಂತಪ್ಪ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಜಿಪಂ ಅಧಿಕಾರಿ- ಸಿಬ್ಬಂದಿ ಹಾಗೂ ಆರೋಗ್ಯ, ಆಯುಷ್ ಇಲಾಖೆಯ ಅಧಿಕಾರಿ- ಸಿಬ್ಬಂದಿ ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್