


ಬಳ್ಳಾರಿ, 06 ಅಕ್ಟೋಬರ್ (ಹಿ.ಸ.)
ಚುನಾವಣಾ ಪ್ರಕರಣಗಳು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಎಫ್ಐಆರ್ ಹಾಕಿರುವ ಬ್ರೂಸ್ಪೇಟೆ - ಎಪಿಎಂಸಿ ಪೊಲೀಸ್ ಠಾಣೆಯ ಸಿಬಿಐಗಳು ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಗಳನ್ನು ತಕ್ಷಣವೇ ಅಮಾನತು ಮಾಡಿ, ಪ್ರಕರಣವನ್ನು ರದ್ದು ಮಾಡಲು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯು ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಬಳ್ಳಾರಿ ನಗರದ ಪೊಲೀಸರು ಎಫ್ಐಆರ್ ದಾಖಲಿಸಿ ಕರ್ತವ್ಯಲೋಪ ಎಸಗಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಎಫ್ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಆಯೋಗದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಫಾರಂ - 7 ಸಲ್ಲಿಸಲಾಗುತ್ತದೆ. ಎಸ್ಐಆರ್ನಲ್ಲಿ ಚುನಾವಣಾ ಆಯೋಗವೇ ಮತ ಪರಿಷ್ಕರಣೆಗೆ ಫಾರಂ - 7 ಸಲ್ಲಿಸಲು ಸೂಚಿಸಿದೆ. ಈ ಕುರಿತು ಯಾವುದೇ ಗೊಂದಲಗಳು - ಸಮಸ್ಯೆಗಳು ; ಅನುಮಾನಗಳು ಇದ್ದಲ್ಲಿ ಕಾಂಗ್ರೆಸ್ಸಿಗರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬೇಕಿತ್ತು. ಆದರೆ, ಸಾರ್ವಜನಿಕರಲ್ಲಿ ಗೊಂದಲಗಳನ್ನು ಮೂಡಿಸಲು ಅನಗತ್ಯವಾಗಿ ವಿವಾದವನ್ನು ಹುಟ್ಟುಹಾಕಿವೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರು ಸೇರಿ ಚುನಾವಣಾ ಆಯೋಗದ ಕರ್ತವ್ಯವನ್ನು ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಮೇಲೆ ದಾಖಲಾಗಿರುವ `ಸುಳ್ಳು ಎಫ್ಐಆರ್' ರದ್ದತಿಗೆ ಕೋರಿ ಬಿಜೆಪಿ ಸೋಮವಾರ ನಡೆಸುತ್ತಿದ್ದ ಶಾಂತಿಯುತವಾದ ಕಾನೂನುಬದ್ಧವಾದ ಪ್ರತಿಭಟನೆಯ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾ ಅನಿಲ್ ನಾಯ್ಡು ಮೋಕ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿ, ದೌರ್ಜನ್ಯ ಮಾಡಿ ಅಮಾನೀಯವಾಗಿ ನಡೆದುಕೊಂಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಬಳ್ಳಾರಿಯಲ್ಲಿ ಪೊಲೀಸರು ರಾಜಕಾರಣಿಗಳ ಕೈಗೊಂಬೆಯಾಗಿ, ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು, ಸೋಮವಾರ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ಪೆÇಲೀಸರು ಬಿಜೆಪಿ ಕಾರ್ಯಕರ್ತರನ್ನು ಎಳೆದಾಡಿ ಚದುರಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮೋಕಾ ಅವರನ್ನು ಮನಸೋ ಇಚ್ಛೆ ಎಳೆದಾಡಿದ ಕಾರಣ ಅವರ ಬಲಭುಜ, ಕೈಬೆರಳು ಇನ್ನಿತರೆಡೆಗಳಲ್ಲಿ ರಕ್ತಗಾಯಗಳಾಗಿವೆ. ಈ ಕುರಿತು ಎಂಎಲ್ಸಿ ಮಾಡಲಾಗಿದೆ. ಈ ಘಟನೆಗೆ ಮೂಲಕಾರಣಾಗಿರುವ `ಸುಳ್ಳು ಎಫ್ಐಆರ್' ದಾಖಲಿಸಿರುವ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಒಳಪಡಿಸಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು ಮೋಕ ಅವರು, ತಮಗಾಗಿರುವ ಗಾಯಗಳ ಕುರಿತು ವಿವರಣೆ ನೀಡಿ, ಬಳ್ಳಾರಿಯಲ್ಲಿ ನ್ಯಾಯುತವಾದ - ಕಾನೂನುಬದ್ಧವಾದ ಪ್ರತಿಭಟನೆಯನ್ನು ನಡೆಸಲಿಕ್ಕೂ ಅವಕಾಶವಿಲ್ಲವಾಗಿದೆ. ಪೊಲೀಸರ ದೌರ್ಜನ್ಯ - ರಾಜಕಾರಣಿಗಳ ಏಜೆಂಟರಂತೆ ವರ್ತಿಸುವಿಕೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಎಸ್. ಮಲ್ಲನಗೌಡ, ರವಿ ಸಂಗನಕಲ್ಲು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್