
ಕೋಲಾರ, 06 ಅಕ್ಟೊಬರ್ (ಹಿ.ಸ.) : ಗ್ರಾಮದ ಸರ್ಕಾರಿ ಗೋಮಾಳ, ಬಂಡಿ ದಾರಿ ಹಾಗೂ ಕಾಲು ದಾರಿಯನ್ನು ಮುಚ್ಚಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರ ವಿರುದ್ಧ ಜಿಲ್ಲಾಧಿಕಾರಿಗಳು ಎಚ್ಚರಿಕೆ ಸಂದೇಶ ರವಾನೆ ಮಾಡಿದರು. ಶ್ರೀನಿವಾಸಪುರ ತಾಲ್ಲೂಕಿನ ಬಂಗವಾದಿ ಗ್ರಾಮದಲ್ಲಿ ಮಂಗಳವಾರ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿದ್ದ ವ್ಯಕ್ತಿಗಳನ್ನು ತರಾಟೆಗೆ ತೆದುಕೊಂಡರು.
ಸ್ಥಳ ಪರಿಶೀಲನೆ ವೇಳೆ ಎದುರುದಾರರಾದ ಪ್ರಕಾಶ್ ಹಾಗೂ ಇತರರು ಉದ್ಧಟತನ ತೋರಿದಾಗ, ನಿಮ್ಮ ಪಾಳೇಗಾರಿಕೆ ಬಿಡಬೇಕು, ಈ ರೀತಿ ದಬ್ಬಾಳಿಕೆ ಮಾಡ್ತೀರಿ, ನೀವು ಈ ರೀತಿ ನಡ್ಕೊಂಡ್ರಲ್ಲ ಅದಕ್ಕೆ ನೀತಿ ರೀತಿ ಇದೆಯಾ? ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು. ಊರಲ್ಲಿ ನೂರಾರು ಕುಟುಂಬಗಳಿದ್ದರೂ ದೂರುದಾರರನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದೀರಿ, ವ್ಯವಸ್ಥೆ ವಿರುದ್ಧ ಹೋಗಬೇಡಿ ಎಂದು ಒತ್ತುವರಿದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ನಾವ್ಯಾರೂ ೨೦೦ ವರ್ಷ, ೩೦೦ ವರ್ಷ ಬದುಕಲ್ಲ. ಒಂದು ಸಂಸ್ಕೃತಿ, ತಾಳ್ಮೆ, ಸಹನೆಯನ್ನು ಎಲ್ಲರೂ ಬಿಟ್ಟುಹೋಗಿದ್ದಾರೆ. ನಾನೇನೋ ಇಲ್ಲಿ ದಾರಿ ಬಂದ್ ಮಾಡ್ಬಿಟ್ಟಿದ್ದೀನಿ ಎನ್ನುವ ಅಹಂಕಾರ ಬೇಡ. ಡಾಕ್ಯುಮೆಂಟ್ಸ್ ಬಹಳ ಇಂಪಾಟೆAðಟ್ ಎಂದು ಮಾರ್ಮಿಕವಾಗಿ ಹೇಳಿದರು.
ಅಲ್ಲದೆ, ಸ್ಥಳದಲ್ಲೇ ಜಮೀನಿನ ಕಡತಗಳನ್ನು ತರಿಸಿಕೊಂಡ ಅವರು, ಸರ್ಕಾರಿ ಜಮೀನಿನಲ್ಲಿ ಒಂದು ಇಂಚು ಕೂಡ ನಾಳೆ ಸಂಜೆ ಒಳಗಡೆ ಒತ್ತುವರಿಯಾಗಿ ಇರಬಾರದು ಎಂದು ಹೇಳುವ ಮೂಲಕ ಸರ್ಕಾರಿ ಆಸ್ತಿ ಉಳಿಸುವ ಸರ್ಕಾರದ ಬದ್ಧತೆಯನ್ನು ಸಾಬೀತುಪಡಿಸಿದರು.
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಯಾವುದೇ ರಾಜಕೀಯ ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿಯದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಡಿಸಿ ರವಿಕುಮಾರ್ ಅಭಯ ನೀಡಿದರು. ಅದ್ಯಾರೇ ಫೋನ್ ಮಾಡ್ಲಿ, ಅವರ ಹೆಸರು, ಅವರ ಮೊಬೈಲ್ ನಂಬರ್, ಅವರ ಹುದ್ದೆ ರೆಕಾರ್ಡ್ ಮಾಡಿ, ಸರ್ಕಾರಕ್ಕೆ ವರದಿ ಮಾಡುತ್ತೇವೆ ಎಂದು ದಿಟ್ಟತನದಿಂದ ಹೇಳುವ ಮೂಲಕ ಭ್ರಷ್ಟಾಚಾರ ಹಾಗೂ ಪ್ರಭಾವ ಮುಕ್ತ ಆಡಳಿತಕ್ಕೆ ಮುನ್ನುಡಿ ಬರೆದರು.
ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ, ಸ್ಥಳದಲ್ಲಿದ್ದ ತಹಶೀಲ್ದಾರ್ ಸುಧೀಂದ್ರ, ಆರ್.ಐ ಮಂಜುನಾಥ್ ಹಾಗೂ ಗ್ರಾಮ ಲೆಕ್ಕಿಗರಿಗೆ ಡಿಸಿ ಕಟ್ಟುನಿಟ್ಟಿನ ಆದೇಶ ನೀಡಿದರು. ಎಷ್ಟು ಗೋಮಾಳ ಇದೆಯೋ ನನಗೆ ಕಂಪ್ಲೀಟ್ ರಿಪೋರ್ಟ್ ಮಾಡಿ. ವಿಎ ರಿಪೋರ್ಟ್, ಆರ್.ಐ ರಿಪೋರ್ಟ್, ತಹಸೀಲ್ದಾರ್ ರಿಪೋರ್ಟ್ ಹಾಕಿ ನನಗೆ ಕಳಿಸಿ, ನಾನು ಆದೇಶ ಮಾಡ್ತೀನಿ. ಕಾಲು ದಾರಿ ಮುಚ್ಚಿದ್ದಾರಲ್ಲ ಅದರ ಬಗ್ಗೆಯೂ ರಿಪೋರ್ಟ್ ಹಾಕಿ, ಅದರ ಮೇಲೆ ಕ್ರಮ ಮಾಡ್ತೀನಿ ಎಂದು ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್