ಎಸ್ಐಆರ್ ಹೆಸರಿನಲ್ಲಿ ಎಸ್ಸಿ, ಅಲ್ಪಸಂಖ್ಯಾತರ ಮತ ಹಕ್ಕು ಕಸಿಯುವ ಯತ್ನ: ಪ್ರಿಯಾಂಕ್ ಖರ್ಗೆ
ಬೆಂಗಳೂರು, 04 ಅಕ್ಟೋಬರ್ (ಹಿ.ಸ.): ಮತದಾರರ ಪಟ್ಟಿಯ ಪರಿಷ್ಕರಣೆಗೆ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ‘ಸಂಘ್ ಇಂಟೆನ್ಸಿವ್ ರಿವಿಷನ್’ ಆಗಿ ಪರಿವರ್ತಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಚುನಾವಣಾ ಆಯೋಗದ ಮೌನ ಸಮ್ಮತಿಯೊಂದಿಗೆ ಪರಿಶಿಷ್ಟ ಜಾತಿ
priyank-kharge-alleges-sangh-intensive-revision-targeting-sc-minority-voters


ಬೆಂಗಳೂರು, 04 ಅಕ್ಟೋಬರ್ (ಹಿ.ಸ.):

ಮತದಾರರ ಪಟ್ಟಿಯ ಪರಿಷ್ಕರಣೆಗೆ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ‘ಸಂಘ್ ಇಂಟೆನ್ಸಿವ್ ರಿವಿಷನ್’ ಆಗಿ ಪರಿವರ್ತಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಚುನಾವಣಾ ಆಯೋಗದ ಮೌನ ಸಮ್ಮತಿಯೊಂದಿಗೆ ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

ಚುನಾವಣಾ ಆಯೋಗದ ವಕ್ತಾರರಂತೆ ಬಿಜೆಪಿ ಮತ್ತು ಆರ್ಎಸ್ಎಸ್ ವರ್ತಿಸುತ್ತಿವೆ ಎಂದು ಆರೋಪಿಸಿದ ಅವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರವು ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ರಾಜ್ಯ ಚುನಾವಣಾ ಆಯೋಗ ಹಾಗೂ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಅಗತ್ಯವಿರುವ ಎಲ್ಲ ಸಾಂಸ್ಥಿಕ ಮತ್ತು ಪ್ರಚಾರಾತ್ಮಕ ಬೆಂಬಲ ನೀಡಿದೆ.

ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಹೀರಾತುಗಳನ್ನೂ ಪ್ರಕಟಿಸಲಾಗಿದೆ ಎಂದು ಖರ್ಗೆ ಹೇಳಿದರು.

ಕರ್ನಾಟಕದಲ್ಲಿ 1.08 ಕೋಟಿಗೂ ಹೆಚ್ಚು ಮಂದಿಯ ಹೆಸರುಗಳು ಮತದಾರರ ಪಟ್ಟಿಯಿಂದ ಹೊರಗುಳಿದಿವೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಅಲ್ಲದೆ, ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ 43.8 ಲಕ್ಷ ಮಂದಿಗೆ ‘ತಾರ್ಕಿಕ ವ್ಯತ್ಯಾಸ’ಗಳಿರುವುದಾಗಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸಾಮೂಹಿಕವಾಗಿ ಮತದಾರರ ಹೆಸರುಗಳನ್ನು ಅಳಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, “ಇದೇನಾ ಬಿಜೆಪಿ ಹೇಳುವ ಶುದ್ಧೀಕರಣ?” ಎಂದು ಪ್ರಶ್ನಿಸಿದರು.

“ಇದು ವಿಶೇಷ ತೀವ್ರ ಪರಿಷ್ಕರಣೆಯಲ್ಲ; ಇದು ಆರ್ಎಸ್ಎಸ್ ನಡೆಸುತ್ತಿರುವ ‘ಸಂಘ್ ಇಂಟೆನ್ಸಿವ್ ರಿವಿಷನ್’. ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರ ಮತಗಳನ್ನೇ ಏಕೆ ಅಳಿಸಲಾಗುತ್ತಿದೆ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಇದೇ ವೇಳೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವುದನ್ನೂ ಅವರು ಖಂಡಿಸಿದರು.

ಕಾಂಗ್ರೆಸ್ ನಿಯೋಗ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಖರ್ಗೆ, ಚುನಾವಣಾ ಆಯೋಗದ ವಕ್ತಾರರಂತೆ ಬಿಜೆಪಿ ಏಕೆ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

“ನಾವು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಹೋಗಿದ್ದರೆ ಅವರಿಗೇನು? ಭಾರತೀಯ ಚುನಾವಣಾ ಆಯೋಗದ ಬಗ್ಗೆ ನಮಗೆ ಸಮಸ್ಯೆಯಿದ್ದರೆ ಅವರಿಗೇನು? ಅವರಿಗೆ ಸಮಸ್ಯೆಯಿದ್ದರೆ ಅವರು ದೂರು ನೀಡಲಿ. ಕಾಂಗ್ರೆಸ್ ನಿಯೋಗ ಯಾವ ನಿಯಮ ಉಲ್ಲಂಘಿಸಿದೆ ಎಂಬುದನ್ನು ಅವರು ಸ್ಪಷ್ಟಪಡಿಸಲಿ,” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande