
ಮಂಡ್ಯ, 31 ಅಕ್ಟೋಬರ್ (ಹಿ.ಸ.):
ಕಾವೇರಿ ನೀರಿನ ಸಮರ್ಪಕ ನಿರ್ವಹಣೆ ಹಾಗೂ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ರೈತರ ಹಿತ ಕಾಪಾಡುವ ಉದ್ದೇಶದ ಮೇಕೆದಾಟು ಯೋಜನೆಗೆ ಈಗಾಗಲೇ 2,500 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ರೈತರ ಖಾಸಗಿ ಜಮೀನು ಕೇವಲ 500 ಎಕರೆ ಮಾತ್ರ ಭೂಸ್ವಾಧೀನವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದ ಪಿಇಎಸ್ ಕಾಲೇಜಿನ ಹೆಲಿಪ್ಯಾಡ್ ಬಳಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಅನುಮತಿ ದೊರೆತಿದೆ. ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಜಮೀನು ಒದಗಿಸುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಬಜೆಟ್ ವೇಳೆಗೆ ಕೇಂದ್ರ ಸರ್ಕಾರದಿಂದ ಅರಣ್ಯ ಅನುಮತಿ ದೊರೆಯುವ ನಿರೀಕ್ಷೆಯಿದೆ ಎಂದರು.
ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ 2,500 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇನ್ನಷ್ಟು ಭೂಮಿ ಗುರುತಿಸುವ ಕಾರ್ಯವೂ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಅರಣ್ಯ ಇಲಾಖೆಗೆ ಪರ್ಯಾಯ ಜಮೀನು ನೀಡುವ ಕುರಿತು ಸಭೆ ನಡೆಸಲಾಗಿದೆ. ಪರ್ಯಾಯ ಭೂಮಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
66 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶ
ಮೇಕೆದಾಟು ಯೋಜನೆಯಡಿ 66 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿರಲಿದೆ. ಕಾವೇರಿ ನೀರು ಹಂಚಿಕೆ ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ವಾರ್ಷಿಕ 177 ಟಿಎಂಸಿ ನೀರು ಹರಿಸಬೇಕಿದೆ. ಮಳೆ ಕೊರತೆ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ನೀರಿನ ಲಭ್ಯತೆ ಮತ್ತು ಹರಿವಿನ ನಿರ್ವಹಣೆ ಸವಾಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮೇಕೆದಾಟು ಯೋಜನೆ ನೆರವಾಗಲಿದೆ ಎಂದು ವಿವರಿಸಿದರು.
ಮೇಕೆದಾಟಿನಲ್ಲಿ 66 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಂಡರೆ ಸಂಕಷ್ಟದ ಸಂದರ್ಭದಲ್ಲಿ ನೀರಿನ ಹರಿವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಹೇಮಾವತಿ, ಹಾರಂಗಿ, ಕಬಿನಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ರೈತರಿಗೂ ಇದರಿಂದ ಅನುಕೂಲವಾಗಲಿದೆ ಎಂದರು.
ಯೋಜನೆಗೆ ಸಂಬಂಧಿಸಿದ ಪರ್ಯಾಯ ಭೂಮಿಯ ವಿವರಗಳನ್ನು ಅರಣ್ಯ ಇಲಾಖೆಯ ಅಂತರ್ಜಾಲ ತಾಣದಲ್ಲಿ ದಾಖಲಿಸಲಾಗುವುದು. ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು. ಮುಂದಿನ ಬಜೆಟ್ ವೇಳೆಗೆ ಅರಣ್ಯ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಬಿಜೆಪಿ ನಾಯಕರು ಕೂಡ ರಾಜಕೀಯ ಬದಿಗಿಟ್ಟು ಯೋಜನೆಗೆ ಅನುಮತಿ ದೊರಕಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.