
ಬೆಂಗಳೂರು, 31 ಅಕ್ಟೋಬರ್ (ಹಿ.ಸ.):
ಬೆಂಗಳೂರಿನ ಖಾಸಗಿ ಹೋಟೆಲ್ನ ಈಜುಕೊಳದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಮುಂದಾದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ನಗರದ ಕಾನ್ರಾಡ್ ಹೋಟೆಲ್ನ ಮೂರನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ಈ ಘಟನೆ ಸಂಭವಿಸಿದೆ.
ಮೃತರನ್ನು ಸ್ಲೋವಾಕಿಯಾ ಮೂಲದ ಓರಿಯಾಟ್ (45) ಹಾಗೂ ನೆದರ್ಲೆಂಡ್ಸ್ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಲನ್ (59) ಎಂದು ಗುರುತಿಸಲಾಗಿದೆ.
ರಕ್ಷಣೆಗೆ ಮುಂದಾದವರಿಗೂ ವಿದ್ಯುತ್ ಶಾಕ್
ಈಜುಕೊಳದಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಇಬ್ಬರು ಪ್ರವಾಸಿಗರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ.
ಅವರನ್ನು ರಕ್ಷಿಸಲು ಮುಂದಾದ ಅಮೆರಿಕ ಮೂಲದ ವ್ಯಕ್ತಿ ಹಾಗೂ ಹೋಟೆಲ್ನ ಪೂಲ್ ಅಟೆಂಡರ್ ಕೂಡ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮೃತ ಅಲೆಕ್ಸಾಂಡರ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹಲಸೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಹೋಟೆಲ್ ನಿರ್ಲಕ್ಷ್ಯದ ಆರೋಪ
ಈಜುಕೊಳದಲ್ಲಿ ವಿದ್ಯುತ್ ಸೋರಿಕೆ ಅಥವಾ ಸುರಕ್ಷತಾ ಲೋಪದಿಂದಲೇ ಅವಘಡ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೋಟೆಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆಯೂ ಆರೋಪಗಳು ಕೇಳಿಬಂದಿವೆ.
ಈಜುಕೊಳದ ವಿದ್ಯುತ್ ಸಂಪರ್ಕ, ಸುರಕ್ಷತಾ ವ್ಯವಸ್ಥೆ ಹಾಗೂ ಘಟನೆಯ ನಿಖರ ಕಾರಣದ ಕುರಿತು ತನಿಖೆ ಮುಂದುವರೆದಿದೆ ಎಂದು ಡಿಸಿಪಿ ವಿಕ್ರಮ್ ಆಮ್ಟೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R