
ಮಂಡ್ಯ, 31 ಅಕ್ಟೋಬರ್ (ಹಿ.ಸ.):
ಇಂದಿರಾ ಭವನ ಕೇವಲ ಕಾಂಗ್ರೆಸ್ ಪಕ್ಷದ ಕಚೇರಿಯಾಗದೆ, ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನ ಸ್ವಾಭಿಮಾನದ ಸಂಕೇತವಾಗಬೇಕು. ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಶಕ್ತ್ಯಾನುಸಾರ ₹100ರಿಂದ ₹10 ಲಕ್ಷದವರೆಗೆ ಕಾಣಿಕೆ ನೀಡಿ ಭವನ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಮಂಡ್ಯದ ಹೊಳಲು ವೃತ್ತದ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂದಿರಾ ಭವನ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಊರಿನಲ್ಲಿ ದೇವಸ್ಥಾನ ನಿರ್ಮಿಸಲು ಮನೆಮನೆಗೆ ತೆರಳಿ ಚಂದಾ ಸಂಗ್ರಹಿಸುವಂತೆ ಈ ಭವನ ನಿರ್ಮಾಣಕ್ಕೂ ಕಾರ್ಯಕರ್ತರು ಕೊಡುಗೆ ನೀಡಬೇಕು. ಎಲ್ಲರೂ ಸೇರಿ ನಿರ್ಮಿಸಿದಾಗ ಮಾತ್ರ ಇದು ನಮ್ಮ ಭವನ, ನಮ್ಮ ಆಸ್ತಿ ಎಂಬ ಆತ್ಮೀಯತೆ ಮೂಡಲು ಸಾಧ್ಯ ಎಂದರು.
ಮಂಡ್ಯ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಗುರಿಯೊಂದಿಗೆ ಕಾರ್ಯಕರ್ತರು ಈಗಿನಿಂದಲೇ ಒಗ್ಗಟ್ಟಿನಿಂದ ಪಕ್ಷ ಸಂಘಟಿಸಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ಹೇಳಿದರು.
ಮಂಡ್ಯದಲ್ಲಿ ಕಾಂಗ್ರೆಸ್ಗೆ ಪ್ರತ್ಯೇಕ ಕಚೇರಿ ನಿರ್ಮಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಇದೀಗ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಉತ್ತಮ ವಿನ್ಯಾಸ ರೂಪಿಸಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದು ಚಲುವರಾಯಸ್ವಾಮಿ ಅವರೊಬ್ಬರ ಜವಾಬ್ದಾರಿಯಲ್ಲ. ಜಿಲ್ಲೆಯ ಮುಖಂಡರು, ಪಂಚಾಯಿತಿ ಸದಸ್ಯರು ಹಾಗೂ ಕಾರ್ಯಕರ್ತರು ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಇಂದಿರಾ ತ್ಯಾಗದ ಸ್ಮರಣೆಗೆ ಭವನ
ದೇಶದ ಐಕ್ಯತೆ, ಸಮಗ್ರತೆ ಮತ್ತು ಶಾಂತಿಗಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಭವನ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೇಂದ್ರವಾಗಬೇಕು ಎಂದರು.
ಬ್ಯಾಂಕುಗಳ ರಾಷ್ಟ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ಬ್ಯಾಂಕಿಂಗ್ ಸೇವೆ ತಲುಪುವಂತೆ ಇಂದಿರಾ ಗಾಂಧಿ ಮಾಡಿದರು. ಬಡವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದರಿಂದ ನೆರವಾಯಿತು. ಉಳುವವನಿಗೆ ಭೂಮಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಮೂಲಕ ಅವರು ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಪ್ರತಿ ಕ್ಷೇತ್ರದಲ್ಲೂ ಇಂದಿರಾ ಭವನ
ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಪ್ರತ್ಯೇಕ ಇಂದಿರಾ ಭವನ ನಿರ್ಮಾಣವಾಗಬೇಕು. ಮಳವಳ್ಳಿಯಲ್ಲಿ ನರೇಂದ್ರಸ್ವಾಮಿ ಅವರು ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮದ್ದೂರಿನಲ್ಲಿ ಉದಯ್ ಅವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಬಂಡಿ ಸಿದ್ದೇಗೌಡರು ಶ್ರೀರಂಗಪಟ್ಟಣದಲ್ಲಿ ಹಾಗೂ ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಅವರು ಭವನ ನಿರ್ಮಾಣಕ್ಕೆ ಮುಂದಾಗಬೇಕು. ಕೆ.ಆರ್. ಪೇಟೆ ಮತ್ತು ಪಾಂಡವಪುರದಲ್ಲೂ ಪಕ್ಷದ ಕಚೇರಿಗಳು ನಿರ್ಮಾಣವಾಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಕರ್ತರು ಒಗ್ಗೂಡುವ ಕೇಂದ್ರ ಇರಬೇಕು ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.