
ಬಳ್ಳಾರಿ, 31 ಅಕ್ಟೋಬರ್ (ಹಿ.ಸ.)
ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳ ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪ್ರಕಟಣೆಗಳ ಮೇಲೆ ಶೇಕಡಾ 50ರಷ್ಟು ರಿಯಾಯಿತಿ ನೀಡುವುದಾಗಿ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಅವರು ತಿಳಿಸಿದ್ದಾರೆ.
ಈ ರಿಯಾಯಿತಿ ಸೌಲಭ್ಯವು ಬೆಂಗಳೂರಿನ ಕನ್ನಡ ಭವನದಲ್ಲಿರುವ ‘ಸಿರಿಗನ್ನಡ ಪುಸ್ತಕ ಮಳಿಗೆ'ಯಲ್ಲಿ ಲಭ್ಯವಿರಲಿದೆ (ಸಂಪರ್ಕ ಸಂಖ್ಯೆ: 080-22107705). ಇದರೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಹಾಗೂ ಪ್ರಾಧಿಕಾರವು ತೆರೆದಿರುವ ಎಲ್ಲಾ ‘ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ'ಗಳಲ್ಲಿಯೂ ಪುಸ್ತಕ ಪ್ರಿಯರಿಗೆ ಈ ರಿಯಾಯಿತಿ ದೊರೆಯಲಿದೆ.
ಮಳಿಗೆಗಳಿಗೆ ತೆರಳಲು ಸಾಧ್ಯವಾಗದ ಓದುಗರು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ (https://kpp.karnataka.gov.in) ಮೂಲಕ ಆನ್ ಲೈನ್ ನಲ್ಲಿಯೂ ಸಹ ಶೇ. 50ರ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ವ್ಯಕ್ತಿಚಿತ್ರಗಳು, ನಾಟಕ, ಅಲೆಮಾರಿ ಸಮುದಾಯಗಳ ಕುರಿತ ಬರಹಗಳು, ವೈದ್ಯಕೀಯ, ಪ್ರಾಚೀನ ಸಾಹಿತ್ಯ, ಜಾನಪದ, ಪರಿಸರ ಹಾಗೂ ಕೃಷಿ ಸೇರಿದಂತೆ ಹಲವು ಪ್ರಕಾರಗಳ ಮೌಲಿಕ ಕೃತಿಗಳನ್ನು ಪ್ರಕಟಿಸಿದೆ. ಪ್ರಾಜ್ಞರಿಂದ ರಚಿತವಾದ ಈ ಉಪಯುಕ್ತ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ ಸದುಪಯೋಗಪಡಿಸಿಕೊಳ್ಳುವಂತೆ ಅವರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್