
ಮಂಡ್ಯ, 27 ಅಕ್ಟೋಬರ್ (ಹಿ.ಸ.):
ಯುವಕರು ಪ್ರಜಾಪ್ರಭುತ್ವ, ಸಂವಿಧಾನ, ಆಡಳಿತ ವ್ಯವಸ್ಥೆ ಹಾಗೂ ಸಂಸದೀಯ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ.
ಅವರಿಗೆ ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯುವ ಸಂಸತ್ತಿನಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಬಳಿಕ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಮಾದರಿಯಲ್ಲಿ ಅಣಕು ಯುವ ಸಂಸತ್ತು ನಡೆಸಿಕೊಟ್ಟರು. ಸಚಿವರು ವಿದ್ಯಾರ್ಥಿಗಳ ಅಣಕು ಅಧಿವೇಶನವನ್ನು ವೀಕ್ಷಿಸಿದರು.
ಆಡಳಿತದಷ್ಟೇ ವಿರೋಧ ಪಕ್ಷವೂ ಮುಖ್ಯ: ಗಣಿಗ ರವಿಕುಮಾರ್
ಶಾಸಕ ಗಣಿಗ ರವಿಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷವೂ ಮಹತ್ವದ್ದಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಇದ್ದಾಗ ಮಾತ್ರ ದೇಶ ಸುಸ್ಥಿರವಾಗಿ ಮುನ್ನಡೆಯಲು ಸಾಧ್ಯ. ಆಡಳಿತ ಪಕ್ಷದ ಎಲ್ಲ ನಿರ್ಧಾರಗಳೂ ಸರಿಯಾಗಿವೆ ಎಂದು ಭಾವಿಸಿದರೂ, ಅವುಗಳನ್ನು ಪ್ರಶ್ನಿಸಲು ಮತ್ತು ತಪ್ಪುಗಳನ್ನು ಎತ್ತಿ ತೋರಿಸಲು ವಿರೋಧ ಪಕ್ಷ ಇರಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಅನಾವರಣಗೊಳ್ಳುತ್ತದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಕಾನೂನು ಸಮಾನವಾಗಿ ಅನ್ವಯಿಸುತ್ತದೆ. ಹೆಲ್ಮೆಟ್ ಕಡ್ಡಾಯದಂತಹ ನಿಯಮಗಳನ್ನು ರೂಪಿಸಿದಾಗ ಪ್ರತಿಯೊಬ್ಬರೂ ಪಾಲಿಸಬೇಕು. ಉಲ್ಲಂಘಿಸಿದರೆ ದಂಡ ತೆರಬೇಕಾಗುತ್ತದೆ. ಹೀಗಾಗಿ ಕಾನೂನಿನ ಗೌರವ ಮತ್ತು ಜವಾಬ್ದಾರಿಯುತ ನಾಗರಿಕತ್ವ ಮುಖ್ಯ ಎಂದು ತಿಳಿಸಿದರು.
ಮತದಾನವೆಂದರೆ ಕೇವಲ ಮಾತನಾಡುವವರನ್ನು ಆಯ್ಕೆ ಮಾಡುವುದಲ್ಲ; ಕೆಲಸ ಮಾಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದಾಗಿದೆ. ಮತದಾರರು ತಮ್ಮ ಪ್ರತಿನಿಧಿಗಳು ರಸ್ತೆ, ಕುಡಿಯುವ ನೀರು, ಮೂಲಸೌಕರ್ಯ, ಕಾನೂನು ಸುವ್ಯವಸ್ಥೆ, ವಿಶ್ವವಿದ್ಯಾಲಯಗಳ ನಿರ್ಮಾಣ, ಗುಣಮಟ್ಟದ ಶಿಕ್ಷಣ ಹಾಗೂ ಜನಪರ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಅಭಿವೃದ್ಧಿ ಕಾರ್ಯಗಳನ್ನು ಪ್ರಶ್ನಿಸಿ, ಜನರ ಪರವಾಗಿ ಧ್ವನಿ ಎತ್ತುವ ವಿರೋಧ ಪಕ್ಷದ ಪಾತ್ರವೂ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಗಣಿಗ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R