
ಬೆಂಗಳೂರು, 27 ಅಕ್ಟೋಬರ್ (ಹಿ.ಸ.):
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ್ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಗೆಲುವು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಒಗ್ಗಟ್ಟು ಹಾಗೂ ಪರಿಶ್ರಮಕ್ಕೆ ಸಂದ ಜಯವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ, ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿದ ಶಿಕ್ಷಕ ಸಮುದಾಯಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೆ, ಎರಡೂ ಪಕ್ಷಗಳ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ್ದಾರೆ.
“ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ, ಹೆಗಲಿಗೆ ಹೆಗಲು ಕೊಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರ ಫಲವಾಗಿ ಈ ಅದ್ಭುತ ಗೆಲುವು ಸಾಧ್ಯವಾಗಿದೆ. ಕಾರ್ಯಕರ್ತರ ಅಪಾರ ಪರಿಶ್ರಮ ಮತ್ತು ಐಕ್ಯತೆಯೇ ನಮ್ಮ ವಿಜಯದ ನಿಜವಾದ ಶಕ್ತಿ” ಎಂದು ಅವರು ತಿಳಿಸಿದ್ದಾರೆ.
ಈ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿರುವ ಅಸಮಾಧಾನಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಪಾದಿಸಿರುವ ನಿಖಿಲ್ ಕುಮಾರಸ್ವಾಮಿ, “ಜನವಿರೋಧಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಈ ಚುನಾವಣೆ ಮುನ್ನುಡಿ ಬರೆದಿದೆ. ಕಾಂಗ್ರೆಸ್ ಅಧಿಕಾರದಿಂದ ನಿರ್ಗಮಿಸುವ ದಿನಗಳು ಇಂದಿನಿಂದಲೇ ಆರಂಭವಾಗಿವೆ” ಎಂದು ಟೀಕಿಸಿದ್ದಾರೆ.
ಗೆಲುವಿಗೆ ಶ್ರಮಿಸಿದ ಎರಡೂ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ಮುಖಂಡರಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿರುವ ಅವರು, ಮೈತ್ರಿಕೂಟದ ಒಗ್ಗಟ್ಟನ್ನು ಮುಂದುವರಿಸುವಂತೆ ಕರೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R