
ಚನ್ನಗಿರಿ, 27 ಅಕ್ಟೋಬರ್ (ಹಿ.ಸ.):
ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಮರೆತುಹೋಗಿದ್ದ ಸುಮಾರು ₹6 ಲಕ್ಷ ಮೌಲ್ಯದ 45 ಗ್ರಾಂ ಚಿನ್ನದ ಒಡವೆಗಳನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಕೆಎಸ್ಆರ್ಟಿಸಿ ಬಸ್ ಚಾಲಕ ಮಂಜುನಾಥ್ ಬಿ. ಅವರು ಪ್ರಾಮಾಣಿಕತೆ ಮತ್ತು ಮಾನವೀಯತೆ ಮೆರೆದಿದ್ದಾರೆ.
ಅಕ್ಟೋಬರ್ 25ರಂದು ಚನ್ನಗಿರಿಯಿಂದ ದಾವಣಗೆರೆಗೆ ಸಂಚರಿಸುತ್ತಿದ್ದ ಕೆಎ 17 ಎಫ್ 2038 ನೋಂದಣಿ ಸಂಖ್ಯೆಯ, ಮಾರ್ಗ ಸಂಖ್ಯೆ 52/53ರ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಜ್ಯೋತಿ ನಾಯ್ಕ್ ಎಂಬ ಮಹಿಳೆ ತಮ್ಮ 45 ಗ್ರಾಂ ಚಿನ್ನದ ಒಡವೆಗಳನ್ನು ಮರೆತು ತೆರಳಿದ್ದರು.
ಬಸ್ಸಿನಲ್ಲಿ ಒಡವೆಗಳು ಪತ್ತೆಯಾದ ತಕ್ಷಣ ಚಾಲಕ ಮಂಜುನಾಥ್ ಅವರು ಅವುಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ, ಕೆಎಸ್ಆರ್ಟಿಸಿ ಘಟಕದ ಭದ್ರತಾ ಶಾಖೆಗೆ ಒಪ್ಪಿಸಿದ್ದಾರೆ. ಬಳಿಕ ಘಟಕ ವ್ಯವಸ್ಥಾಪಕ ಸಿದ್ದೇಶ್ ಸಿದ್ದನಮಠ ಅವರ ನೇತೃತ್ವದಲ್ಲಿ ಒಡವೆಗಳ ವಾರಸುದಾರರನ್ನು ಪತ್ತೆಹಚ್ಚುವ ಕಾರ್ಯ ಕೈಗೊಳ್ಳಲಾಯಿತು.
ಅಕ್ಟೋಬರ್ 27 ರಂದು ಘಟಕದ ಸಿಬ್ಬಂದಿಯ ಸಮ್ಮುಖದಲ್ಲಿ ಚಿನ್ನದ ಒಡವೆಗಳನ್ನು ಜ್ಯೋತಿ ನಾಯ್ಕ್ ಅವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.
ಪ್ರಾಮಾಣಿಕತೆಗೆ ಸಾರ್ವಜನಿಕರ ಮೆಚ್ಚುಗೆ
ಪ್ರಯಾಣಿಕರು ಕಳೆದುಕೊಂಡಿದ್ದ ಬೆಲೆಬಾಳುವ ಒಡವೆಗಳನ್ನು ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ಸುರಕ್ಷಿತವಾಗಿ ಹಿಂತಿರುಗಿಸಿದ ಚಾಲಕ ಮಂಜುನಾಥ್ ಬಿ. ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ಪ್ರಾಮಾಣಿಕ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸಿಬ್ಬಂದಿಯ ಪ್ರಾಮಾಣಿಕತೆ ಮತ್ತು ಮಾನವೀಯ ಕಾರ್ಯವನ್ನು ಶ್ಲಾಘಿಸಿದ ಘಟಕ ವ್ಯವಸ್ಥಾಪಕ ಸಿದ್ದೇಶ್ ಸಿದ್ದನಮಠ ಅವರು, ಚಾಲಕ ಮಂಜುನಾಥ್ ಸೇರಿದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R