ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಮತ್ತೆ ಸಂಕಷ್ಟ: ₹23.35 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಆನ್ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಸೇರಿದ ₹23.35 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
kc-veerendra-pappi-assets-worth-rs-23-35-crore-attached


ಬೆಂಗಳೂರು, 27 ಅಕ್ಟೋಬರ್ (ಹಿ.ಸ.):

ಆನ್ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಜಾರಿ ನಿರ್ದೇಶನಾಲಯ (ಇ.ಡಿ.) ವೀರೇಂದ್ರ ಪಪ್ಪಿ ಹಾಗೂ ಇತರರಿಗೆ ಸೇರಿದ ಒಟ್ಟು ₹23.35 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಇ.ಡಿ. ಅಧಿಕಾರಿಗಳ ಮಾಹಿತಿಯ ಪ್ರಕಾರ, ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ₹13.76 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹9.58 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿವೆ. ಈ ಕ್ರಮದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಮುಟ್ಟುಗೋಲು ಹಾಕಿಕೊಂಡಿರುವ ಒಟ್ಟು ಆಸ್ತಿಗಳ ಮೌಲ್ಯ ₹343 ಕೋಟಿಗೆ ಏರಿಕೆಯಾಗಿದೆ.

₹2,300 ಕೋಟಿಗೂ ಅಧಿಕ ಅಕ್ರಮ ಹಣ ವರ್ಗಾವಣೆ ಆರೋಪ

‘ಕಿಂಗ್ 567’ ಸೇರಿದಂತೆ ವಿವಿಧ ಆನ್ಲೈನ್ ಬೆಟ್ಟಿಂಗ್ ಆ್ಯಪ್ಗಳ ಮೂಲಕ ಜನರನ್ನು ವಂಚಿಸಿ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇ.ಡಿ. ತನಿಖೆ ನಡೆಸುತ್ತಿದೆ.

ಬೆಟ್ಟಿಂಗ್ನಿಂದ ಬಂದ ಹಣವನ್ನು ಹವಾಲಾ ಮಾರ್ಗಗಳು, ನಕಲಿ ಕಂಪನಿಗಳು ಹಾಗೂ ಇತರರ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿರುವ ಶಂಕೆಯೂ ಇದೆ. ಈ ಜಾಲದ ಮೂಲಕ ₹2,300 ಕೋಟಿಗೂ ಅಧಿಕ ಮೊತ್ತದ ಅಕ್ರಮ ಹಣ ವರ್ಗಾವಣೆ ನಡೆದಿರುವುದನ್ನು ತನಿಖೆಯಲ್ಲಿ ಗುರುತಿಸಲಾಗಿದೆ ಎಂದು ಇ.ಡಿ. ತಿಳಿಸಿದೆ.

ಈ ಹಿಂದೆ ದೇಶದ ವಿವಿಧ ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು ನಗದು, ಚಿನ್ನಾಭರಣ, ಐಷಾರಾಮಿ ವಾಹನಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದರು.

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಶಾಸಕ

ಪ್ರಕರಣಕ್ಕೆ ಸಂಬಂಧಿಸಿದಂತೆ 2025ರ ಆಗಸ್ಟ್ 23ರಂದು ಸಿಕ್ಕಿಂನ ಗ್ಯಾಂಗ್ಟಾಕ್ನಲ್ಲಿ ವೀರೇಂದ್ರ ಪಪ್ಪಿ ಅವರನ್ನು ಇ.ಡಿ. ಬಂಧಿಸಿತ್ತು. ಸುಮಾರು ನಾಲ್ಕು ತಿಂಗಳ ನ್ಯಾಯಾಂಗ ಬಂಧನದ ಬಳಿಕ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಅದರಂತೆ 2025ರ ಡಿಸೆಂಬರ್ 30ರಂದು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದರು.

ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಆನ್ಲೈನ್ ಬೆಟ್ಟಿಂಗ್ ವ್ಯವಹಾರಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande