ಬಿಜೆಪಿಯಿಂದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ರಮೇಶ್ ಬಾಬು
ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ವೈಯಕ್ತಿಕ ದಾಳಿಗಳು ರಾಜಕೀಯ ಸಂವಾದದ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆತಂಕ ವ್ಯಕ್ತಪಡಿಸಿದ್ದಾರೆ.
Kharge-RameshBabu-BJP


ಬೆಂಗಳೂರು, 27 ಅಕ್ಟೋಬರ್ (ಹಿ.ಸ.):

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರೂ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕರು ಪದೇಪದೇ ವೈಯಕ್ತಿಕ ಟೀಕೆ, ಅವಹೇಳನಕಾರಿ ಹೇಳಿಕೆ ಹಾಗೂ ಮಾನಹಾನಿಕರ ಅಭಿಯಾನಗಳನ್ನು ನಡೆಸುತ್ತಿರುವುದು ದೇಶದಲ್ಲಿ ರಾಜಕೀಯ ಸಂವಾದದ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಖರ್ಗೆ ಅವರು ದೇಶದ ಅತ್ಯಂತ ಅನುಭವಿ ಸಂಸದೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ದಶಕಗಳ ಕಾಲದ ಶಾಸಕಾಂಗ ಅನುಭವ ಮತ್ತು ಪ್ರಜಾಸತ್ತಾತ್ಮಕ ಚಟುವಟಿಕೆಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಸೈದ್ಧಾಂತಿಕ ವಿಷಯಗಳಲ್ಲಿ ಅವರನ್ನು ಎದುರಿಸಲು ವಿಫಲವಾಗಿರುವ ಬಿಜೆಪಿ, 2014ರಿಂದಲೂ ಒಂದಲ್ಲ ಒಂದು ಕಾರಣಕ್ಕೆ ಅವರ ಮೇಲಿನ ವೈಯಕ್ತಿಕ ದಾಳಿ ಮೂಲಕ ಅವರ ಪ್ರತಿಷ್ಠೆಗೆ ಧಕ್ಕೆ ತರಲು ಸಂಘಟಿತ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಖರ್ಗೆ ವಿರುದ್ಧ ಬಿಜೆಪಿ ನಾಯಕರ ಸರಣಿ ದಾಳಿಗಳ ವಿವರ:

11-12-2015: ಬಿಜೆಪಿ ಸಂಸದ ವೀರೇಂದ್ರ ಸಿಂಗ್ ಅವರು ಖರ್ಗೆ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿ ದಾಳಿ ನಡೆಸಿದರು.

ಫೆಬ್ರವರಿ 2016: ಆರ್ಎಸ್ಎಸ್ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಚಿವರು, ವಿಶೇಷವಾಗಿ ಎಂ. ವೆಂಕಯ್ಯ ನಾಯ್ಡು ಸೇರಿದಂತೆ ಹಲವರು ಲೋಕಸಭೆಯಲ್ಲಿ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

06-02-2017: ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಬಿಜೆಪಿ ಸಚಿವರು ಖರ್ಗೆ ಅವರ ಮೇಲೆ ದಾಳಿ ಮಾಡಿದರು.

2019ರ ಲೋಕಸಭಾ ಚುನಾವಣೆ: ಸಂಸತ್ತಿನಲ್ಲಿ ಖರ್ಗೆ ಅವರನ್ನು ಎದುರಿಸಲಾಗದ ಬಿಜೆಪಿ ನಾಯಕರು, ಅವರನ್ನು ಚುನಾವಣೆಯಲ್ಲಿ ಸೋಲಿಸಲು ಗೂಢ ಸಂಚು ರೂಪಿಸಿದರು.

20-12-2022: ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತಿತರರು ರಾಜ್ಯಸಭೆಯಲ್ಲಿ ಖರ್ಗೆ ಅವರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದರು.

27-04-2023: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಖರ್ಗೆ ಅವರ ವಿರುದ್ಧ ಮಾನಹಾನಿಕರ ದಾಳಿ ನಡೆಸಿದರು.

02-08-2023: ಕರ್ನಾಟಕದ ಮಾಜಿ ಗೃಹ ಸಚಿವರಾದ ಅರಾಗ ಜ್ಞಾನೇಂದ್ರ ಅವರು ಖರ್ಗೆ ಅವರ ಮೈಬಣ್ಣದ ಕುರಿತು ಅವಹೇಳನಕಾರಿ ಟೀಕೆ ಮಾಡಿದರು.

ಸಾಂವಿಧಾನಿಕ ಮೌಲ್ಯ ಮತ್ತು ಗೌರವದ ಅಗತ್ಯ:

ಇತ್ತೀಚೆಗೆ 2026ರ ಅಕ್ಟೋಬರ್ 25ರಂದು ಪಾಟ್ನಾದಲ್ಲಿ ಖರ್ಗೆ ಅವರು ನೀಡಿದ ಹೇಳಿಕೆಗಳ ಸುತ್ತ ಸೃಷ್ಟಿಯಾದ ವಿವಾದವೂ ಸೇರಿದಂತೆ, ರಾಜಕೀಯ ಸಂಘರ್ಷಗಳು ವೈಯಕ್ತಿಕ ನಿಂದನೆಯತ್ತ ತಿರುಗುತ್ತಿರುವುದು ಕಳವಳಕಾರಿ. ಪ್ರಜಾಪ್ರಭುತ್ವದಲ್ಲಿ ಯಾವುದೇ ನಾಯಕರ ಹೇಳಿಕೆಗಳನ್ನು ಟೀಕಿಸುವ ಅಥವಾ ವಿವರಣೆ ಕೇಳುವ ಹಕ್ಕು ಎಲ್ಲ ಪಕ್ಷಗಳಿಗೂ ಇದೆ. ಆದರೆ, ಈ ಹೊಣೆಗಾರಿಕೆಯು ಪಕ್ಷಪಾತವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು.

ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯು ಅಪಾರ ಸಾಂಸ್ಥಿಕ ಮಹತ್ವವನ್ನು ಹೊಂದಿದೆ. ರಾಜಕೀಯ ಎದುರಾಳಿಗೆ ಗೌರವ ನೀಡುವುದು ದೌರ್ಬಲ್ಯವಲ್ಲ, ಬದಲಿಗೆ ಅದು ಪ್ರಜಾಸತ್ತಾತ್ಮಕ ಪ್ರಬುದ್ಧತೆಯ ಸಂಕೇತ.

ಬಿಜೆಪಿ ನಾಯಕತ್ವವು ವೈಯಕ್ತಿಕ ದ್ವೇಷ ಮತ್ತು ನಿಂದನೆಗಳನ್ನು ಬದಿಗಿಟ್ಟು, ವಿಷಯಾಧಾರಿತ ಚರ್ಚೆ, ನೀತಿಗಳು ಹಾಗೂ ಸಂಸದೀಯ ಮೌಲ್ಯಗಳ ಮೂಲಕ ಸವಾಲು ಹಾಕಬೇಕು ಎಂದು ರಮೇಶ್ ಬಾಬು ಅವರು ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande