




ಬಳ್ಳಾರಿ, 27 ಅಕ್ಟೋಬರ್ (ಹಿ.ಸ.)
ನಿಯಮಬಾಹಿರವಾಗಿ ಹಾಗೂ ಅಶುಚಿತ್ವದಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರುತ್ತಿದ್ದ ಹೋಟೆಲ್ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜಂಟಿ ತಂಡವು ದಾಳಿ ನಡೆಸಿ, ನಿಯಮ ಉಲ್ಲಂಘಿಸಿದ ಎರಡು ಹೋಟೆಲ್ಗಳಿಗೆ ಸ್ಥಳದಲ್ಲೇ ಒಟ್ಟು ರೂ.50,000 ದಂಡ ವಿಧಿಸಿವೆ.
ಜಿಲ್ಲಾ ಅಂಕಿತ ಅಧಿಕಾರಿಗಳ ನೇತೃತ್ವದಲ್ಲಿ, ಆಹಾರ ಸುರಕ್ಷತೆ ಅಧಿಕಾರಿಗಳು ಮತ್ತು ಬಳ್ಳಾರಿ ತಹಶೀಲ್ದಾರರ ತಂಡವು ನಗರದ ಪ್ರಮುಖ ಹೋಟೆಲ್ಗಳು ಮತ್ತು ಬೇಕರಿಯ ಮೇಲೆ ಈ ಕಾರ್ಯಾಚರಣೆ ನಡೆಸಿದೆ.
ಅಧಿಕಾರಿಗಳು ಹಳೇ ಬಸ್ ನಿಲ್ದಾಣದ ಎದುರಿಗಿರುವ ಹೋಟೆಲ್ ಮಯೂರಕ್ಕೆ ಭೇಟಿ ನೀಡಿ, ಗಂಭೀರ ಲೋಪಗಳನ್ನು ಪತ್ತೆ ಮಾಡಿ, ಆಹಾರ ಸುರಕ್ಷತಾ ಕಾಯ್ದೆಯಡಿ ಪರವಾನಿಗೆ ಪಡೆಯದೆ ಹೋಟೆಲ್ ನಡೆಸುತ್ತಿರುವುದನ್ನು ಪತ್ತೆ ಮಾಡಿ, ಆಹಾರ ತಯಾರಿಸುವಲ್ಲಿ ತೀವ್ರ ಅಶುಚಿತ್ವ, ಗೋಡೆ ಹಾಗೂ ಕಿಟಕಿಗಳಲ್ಲಿ ಧೂಳು,
ಅಸಮರ್ಪಕ ಚರಂಡಿ ವ್ಯವಸ್ಥೆ, ಅಡುಗೆ ತಯಾರಕರು ಗ್ಲೌಸ್ ಹಾಗೂ ಮಾಸ್ಕ್ ಧರಿಸದೇ ಇರುವುದು, ಆಹಾರ ಕಲಬೆರಕೆಯನ್ನು ತಪಾಸಣೆ ಮಾಡಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಹೋಟೆಲ್ಗೆ ಸ್ಥಳದಲ್ಲೇ ರೂ.25,000 ದಂಡ ವಿಧಿಸಿ, ನ್ಯೂನತೆಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಯಿತು.
ದುರ್ಗಮ್ಮ ಗುಡಿ ವೃತ್ತದಲ್ಲಿರುವ ಹೋಟೆಲ್ ರೇಣುಕಾ ದರ್ಶಿನಿಯಲ್ಲೂ ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ. ಆಹಾರ ತಯಾರಿಕಾ ಸ್ಥಳದಲ್ಲಿ ಶುಚಿತ್ವದ ಕೊರತೆ ಮತ್ತು ಧೂಳು ತುಂಬಿತ್ತು. ಕೆಲಸಗಾರರು ಮಾಸ್ಕ್ ಹಾಗೂ ಗ್ಲೌಸ್ ಬಳಸುತ್ತಿರಲಿಲ್ಲ. ಪರಿಶೀಲನೆ ವೇಳೆ ಅಡುಗೆಗೆ ಕೊಳೆತ ತರಕಾರಿ ಬಳಸುತ್ತಿರುವುದು ಹಾಗೂ ಟೀ ಪುಡಿಗೆ ಬಣ್ಣ ಮಿಶ್ರಣ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹೋಟೆಲ್ನಿಂದಲೂ ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ನಿಯಮ ಉಲ್ಲಂಘನೆಗಾಗಿ ಸ್ಥಳದಲ್ಲೇ ರೂ.25,000 ದಂಡ ವಿಧಿಸಲಾಯಿತು.
ದುರ್ಗಮ್ಮ ಗುಡಿ ಸರ್ಕಲ್ ಬಳಿಯಿರುವ ರೇಣುಕಾ ಬೇಕರಿಗೂ ಅಧಿಕಾರಿಗಳ ತಂಡ ಭೇಟಿ ನೀಡಿ, 3 ಆಹಾರ ಮಾದರಿಗಳನ್ನು ಸಂಗ್ರಹಿಸಿದೆ. ಬೇಕರಿ ಆವರಣವು ಸ್ವಚ್ಛವಾಗಿ ನಿರ್ವಹಿಸಲ್ಪಟ್ಟಿರುವುದು ಕಂಡುಬಂದಿದೆ. ಯಾವುದೇ ನ್ಯೂನತೆಗಳು ಇಲ್ಲದ ಕಾರಣ, ಮುಂದೆಯೂ ಇದೇ ರೀತಿ ಸ್ವಚ್ಛತೆ ಕಾಪಾಡಿಕೊಂಡು ಹೋಗುವಂತೆ ಮಾಲೀಕರಿಗೆ ಸಲಹೆ ನೀಡಲಾಯಿತು.
ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಹಾಗೂ ಅಶುಚಿತ್ವ ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿಗಳು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್