
ಬಳ್ಳಾರಿ, 27 ಅಕ್ಟೋಬರ್ (ಹಿ.ಸ.)
ಹಾವು ಕಡಿತದಿಂದ ಸಂಭವಿಸುವ ಸಾವು-ನೋವುಗಳನ್ನು ತಡೆಗಟ್ಟಲು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದ ಎ.ಎಸ್.ವಿ (ಆಂಟಿ ಸ್ನೇಕ್ ವೆನಮ್) ಔಷಧ ದಾಸ್ತಾನು ಇಟ್ಟುಕೊಳ್ಳುವುದು ಹಾಗೂ ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಸನ್ನದ್ಧವಾಗಿಡುವುದು ಕಡ್ಡಾಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಅಲಕಾನಂದ ಡಿ. ಮಳಗಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕದ ಸಹಯೋಗದಲ್ಲಿ ಡಿಹೆಚ್ಓ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಹಾವು ಕಡಿತ ಪ್ರಕರಣಗಳ ಲೆಕ್ಕ ಪರಿಶೋಧನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾವು ಕಡಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ತಕ್ಷಣವೇ ಯಾವುದೇ ವಿಳಂಬವಿಲ್ಲದೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಅಗತ್ಯ ಔಷಧ ಮತ್ತು ವೈದ್ಯಕೀಯ ಸೌಲಭ್ಯಗಳು ಲಭ್ಯವಿರಬೇಕು ಹಾಗೂ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಉನ್ನತ ಚಿಕಿತ್ಸಾ ಕೇಂದ್ರಗಳಿಗೆ ಸಾಗಿಸಲು ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬ0ಧಪಟ್ಟ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಮೌಢ್ಯ, ನಾಟಿ ಚಿಕಿತ್ಸೆಯ ಮೊರೆ ಹೋಗಬೇಡಿ:
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ. ಅವರು ಮಾತನಾಡಿ, ಹಾವು ಕಚ್ಚಿದಾಗ ಗಾಬರಿಯಾಗದೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಬೇಕು. ಯಾವುದೇ ಕಾರಣಕ್ಕೂ ಮೌಢ್ಯ, ಮೂಢನಂಬಿಕೆ ಅಥವಾ ನಾಟಿ ಔಷಧಿಗಳ ಮೊರೆ ಹೋಗಬಾರದು. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಹಾವು ಕಚ್ಚಿದ ಭಾಗಕ್ಕೆ ಬಟ್ಟೆ ಕಟ್ಟುವುದು, ಬ್ಲೇಡ್ ಅಥವಾ ಚಾಕುವಿನಿಂದ ಗಾಯ ಮಾಡುವುದು, ಸುಡುವುದು ಮುಂತಾದ ಅಪಾಯಕಾರಿ ಕ್ರಮಗಳನ್ನು ಕೈಗೊಳ್ಳದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಿಬ್ಬಂದಿಗೆ ಸೂಚಿಸಿದರು.
ಜಮೀನಿನಲ್ಲಿ ಕೆಲಸ ಮಾಡುವಾಗ ರಕ್ಷಾ ಕವಚಗಳನ್ನು ಧರಿಸುವುದು, ರಾತ್ರಿ ವೇಳೆ ಸಂಚರಿಸುವಾಗ ಕಡ್ಡಾಯವಾಗಿ ಟಾರ್ಚ್ ಬಳಸುವುದು, ನೆಲದ ಮೇಲೆ ಮಲಗದೆ ಎತ್ತರದ ಸ್ಥಳದಲ್ಲಿ ಸೊಳ್ಳೆ ಪರದೆ ಬಳಸಿ ಮಲಗುವುದು ಹಾಗೂ ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಮೂಲಕ ಇಲಿ, ಹೆಗ್ಗಣಗಳು ಬಾರದಂತೆ ನೋಡಿಕೊಳ್ಳುವ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ತಜ್ಞ ವೈದ್ಯರಾದ ಡಾ. ಹಳ್ಳಿ ಕರಿಬಸಪ್ಪ, ಡಾ. ಲಿಂಗರಾಜ್, ಡಾ. ಶ್ರೀಧರ್, ಡಾ. ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಮಂಜುನಾಥ್, ಡಾ. ಹರೀಶ್, ಡಾ. ಶ್ರೀಹರಿ, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ವಿನಾಯಕ, ಡಾ. ವಿಶಾಲಾಕ್ಷಿ, ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಶರತ್ಬಾಬು ಕೆ., ಜಿಲ್ಲಾ ಮೈಕ್ರೋಬಯಾಲಜಿಸ್ಟ್ ಶಿವಾನಂದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್