ರಸ್ತೆ ಕಾಮಗಾರಿ ವಿಳಂಬ ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತರಾಟೆ
ಬೆಂಗಳೂರು, 26 ಅಕ್ಟೋಬರ್ (ಹಿ.ಸ.): ನಗರದಲ್ಲಿ ರಸ್ತೆ ಕಾಮಗಾರಿಗಳ ವಿಳಂಬ ಹಾಗೂ ಕಳಪೆ ನಿರ್ವಹಣೆ ಕುರಿತು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಗುತ್ತಿಗೆದಾರರು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
krishna-byrе-gowda-raps-contractors-gba-officials-over-road-work-delays-bengaluru


ಬೆಂಗಳೂರು, 26 ಅಕ್ಟೋಬರ್ (ಹಿ.ಸ.):

ನಗರದಲ್ಲಿ ರಸ್ತೆ ಕಾಮಗಾರಿಗಳ ವಿಳಂಬ ಹಾಗೂ ಕಳಪೆ ನಿರ್ವಹಣೆ ಕುರಿತು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಗುತ್ತಿಗೆದಾರರು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಮವಾರ ನಗರದ ವಿವಿಧೆಡೆ ಸಿಟಿ ರೌಂಡ್ಸ್ ನಡೆಸಿದ ಸಚಿವರು, ರಸ್ತೆ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ವಿಶೇಷವಾಗಿ ವೈಟ್ ಟಾಪಿಂಗ್ ಕಾಮಗಾರಿಗಳು ವಿಳಂಬವಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಹೆಣ್ಣೂರು–ಬಾಗಲೂರು ರಸ್ತೆ ಸಂಪರ್ಕದ ಪ್ರಮುಖ ರಸ್ತೆಯ ಕಾಮಗಾರಿಯ ಪ್ರಗತಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಕಾಮಗಾರಿಗಳ ವಿಳಂಬದ ಕುರಿತು ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ‘ನಿಮ್ಮ ತಪ್ಪಿಗೆ ನಾವು ಜನರಿಂದ ಬೈಸಿಕೊಳ್ಳಬೇಕಾಗಿದೆ. ರಸ್ತೆ ಕಾಮಗಾರಿ ಇಷ್ಟು ವಿಳಂಬವಾದರೆ ಜನರ ಮುಂದೆ ನಾವು ತಲೆ ತಗ್ಗಿಸಬೇಕಾಗುತ್ತದೆ. ರಸ್ತೆ ಹೀಗಿದ್ದರೆ ಜನ ನಮಗೆ ಬೈಯುತ್ತಾರೆ, ನಿಮಗಲ್ಲ’ ಎಂದು ಕಟುವಾಗಿ ಹೇಳಿದರು ಎನ್ನಲಾಗಿದೆ.

ರಸ್ತೆ ಕಾಮಗಾರಿಗಳಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ನಿರೀಕ್ಷಿತ ಪ್ರಗತಿ ಕಂಡುಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿರುವುದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಗುತ್ತಿಗೆದಾರರು ಮತ್ತು ಎಂಜಿನಿಯರ್ಗಳು ಕಾಮಗಾರಿಗಳ ವೇಗ ಹೆಚ್ಚಿಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಬಿಎ ಮುಖ್ಯ ಆಯುಕ್ತರಿಂದ ಪದೇಪದೇ ಸೂಚನೆಗಳು ಬಂದಿದ್ದರೂ ಗುತ್ತಿಗೆದಾರರು ಹಾಗೂ ಎಂಜಿನಿಯರ್ಗಳು ಕಾಮಗಾರಿಗಳ ಬಗ್ಗೆ ನಿರೀಕ್ಷಿತ ಕಾಳಜಿ ತೋರಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ಇಂತಹ ಸಂದರ್ಭದಲ್ಲಿ ಸಚಿವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿರುವುದು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮೂಡಿಸಿದೆ.

ಅನಧಿಕೃತ ಗಗನಚುಂಬಿ ಕಟ್ಟಡಗಳ ಬಗ್ಗೆಯೂ ಪ್ರಶ್ನೆ

ನಗರದಲ್ಲಿ ಅನುಮತಿ ಇಲ್ಲದೆ ನಿರ್ಮಾಣವಾಗುತ್ತಿರುವ ಗಗನಚುಂಬಿ ಕಟ್ಟಡಗಳ ಬಗ್ಗೆಯೂ ಸಚಿವರು ಪ್ರಶ್ನೆ ಎತ್ತಿದರು. ಇಂತಹ ಕಟ್ಟಡಗಳ ನಿರ್ಮಾಣದ ಮೇಲೆ ಸೂಕ್ತ ನಿಯಂತ್ರಣ ಸಾಧಿಸುವುದು ಹಾಗೂ ನಿಯಮ ಉಲ್ಲಂಘನೆಗಳನ್ನು ತಡೆಯುವುದು ಅಗತ್ಯ ಎಂದು ಒತ್ತಿಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande