
ಹರಪನಹಳ್ಳಿ, 26 ಅಕ್ಟೋಬರ್ (ಹಿ.ಸ.):
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಲಹಳ್ಳಿ ಗ್ರಾಮದಲ್ಲಿ ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸುಮಾರು ಏಳು ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಗ್ರಾಮದ ರೈತರಾದ ಗಂಗಪ್ಪ ಸಾರಥಿ ಅವರ ಎರಡು ಎಕರೆ, ಚಿಕ್ಕಬಿದರಿ ಮಲ್ಲೇಶ್ ಅವರ ಎರಡು ಎಕರೆ ಹಾಗೂ ಕಡತಿ ಶೇಖಪ್ಪ ಅವರ ಮೂರು ಎಕರೆ ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇದರಿಂದ ರೈತರಿಗೆ ಭಾರಿ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ.
ಕಳೆದ ವರ್ಷವೂ ಬೆಂಕಿ ಅವಘಡ:
2025ರಲ್ಲಿಯೂ ಇದೇ ರೀತಿಯಲ್ಲಿ ಕಬ್ಬಿನ ಬೆಳೆಗೆ ಬೆಂಕಿ ತಗುಲಿತ್ತು. ಈ ಹಿನ್ನೆಲೆಯಲ್ಲಿ ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸುವಂತೆ ಕೋರಲಾಗಿತ್ತು. ಆದರೆ, ಅಧಿಕಾರಿಗಳು ಮನವಿಗೆ ಸ್ಪಂದಿಸಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಮತ್ತೆ ವಿದ್ಯುತ್ ಅವಘಡದಿಂದ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು ಏಳು ಎಕರೆ ಕಬ್ಬು ನಾಶವಾಗಿದೆ ಎಂದು ರೈತರು ದೂರಿದ್ದಾರೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿರುವ ಅವರು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಹಾರಕ್ಕೆ ರೈತರ ಆಗ್ರಹ:
ಕಬ್ಬಿನ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಸ್ಥಳೀಯ ಶಾಸಕಿ ಲತಾ ಮಲ್ಲಿಕಾರ್ಜುನ್ ಅವರು ಕೂಡಲೇ ಸಮಸ್ಯೆಯತ್ತ ಗಮನಹರಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R