ನಟ ಧನ್ವೀರ್ ವಿರುದ್ಧ ಝೈದ್ ಖಾನ್ ಅಭಿಮಾನಿಗಳ ಆಕ್ರೋಶ; ಬಹಿರಂಗ ಕ್ಷಮೆಯಾಚನೆಗೆ ಆಗ್ರಹ
ನಟ ಝೈದ್ ಖಾನ್ ವಿರುದ್ಧ ಅವಹೇಳನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಟ ಧನ್ವೀರ್ ಗೌಡ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮಂಡ್ಯದಲ್ಲಿ ತೀವ್ರ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸುವುದಾಗಿ ಝೈದ್ ಖಾನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಎಚ್.ಬಿ. ವಿಜಯ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
Zaid Khan Fans Demand Public Apology from Dhanveer Gowda in Mandya


ಮಂಡ್ಯ, 26 ಅಕ್ಟೋಬರ್ (ಹಿ.ಸ.):

ನಟ ಧನ್ವೀರ್ ನಟ ಝೈದ್ ಖಾನ್ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಟ ಧನ್ವೀರ್ ಗೌಡ ವಿರುದ್ಧ ಝೈದ್ ಖಾನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧನ್ವೀರ್ ಗೌಡ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮಂಡ್ಯದಲ್ಲಿ ತೀವ್ರ ಪ್ರತಿಭಟನೆ ನಡೆಸುವುದರ ಜೊತೆಗೆ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಝೈದ್ ಖಾನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಎಚ್.ಬಿ. ವಿಜಯ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಝೈದ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಧನ್ವೀರ್ ಗೌಡ ಅವರು ಅತ್ಯಂತ ಕೀಳು ಭಾಷೆ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವುದು ಸರಿಯಲ್ಲ ಎಂದು ವಿಜಯ್ ಕುಮಾರ್ ಆಕ್ಷೇಪಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.

ಧನ್ವೀರ್ ಗೌಡ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ನಾಳೆಯೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದರ ಜೊತೆಗೆ ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಎಚ್ಚರಿಕೆಯನ್ನು ಮೀರಿ ಮಂಡ್ಯ ಜಿಲ್ಲೆಗೆ ಕಾಲಿಟ್ಟರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ವಿಜಯ್ ಕುಮಾರ್ ಹೇಳಿದ್ದಾರೆ.

ಝೈದ್ ಖಾನ್ ಅವರು ನಟ ದರ್ಶನ್ ಅವರ ಕುಟುಂಬದವರೊಂದಿಗೆ ಹೊಂದಿರುವ ಉತ್ತಮ ಒಡನಾಟವನ್ನು ಸಹಿಸದೆ ಧನ್ವೀರ್ ಗೌಡ ಅವರು ದರ್ಶನ್ ಕುಟುಂಬದವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಅಭಿಮಾನಿಗಳ ಬಳಗ, ಇಂತಹ ಘಟನೆಗಳು ಮರುಕಳಿಸದಂತೆ ಧನ್ವೀರ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದೆ.

ಒಂದೆರಡು ಸಿನಿಮಾಗಳಲ್ಲಿ ಸೋಲು ಕಂಡ ಬಳಿಕ ಹಣ ಮತ್ತು ಆಸ್ತಿಯ ದುರಹಂಕಾರದಿಂದ ಇತರರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಧನ್ವೀರ್ ಗೌಡ ವಿರುದ್ಧ ವಿಜಯ್ ಕುಮಾರ್ ಟೀಕಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande