
ಬಳ್ಳಾರಿ, 26 ಅಕ್ಟೋಬರ್ (ಹಿ.ಸ.)
ರಾಮನ ಮಕ್ಕಳಾದ ಲವ-ಕುಶ ಹಾಗೂ ಮಹರ್ಷಿ ವಾಲ್ಮೀಕಿ ಅವರ ಸಂಬಂಧದಿಂದಲೇ ಗುರು-ಶಿಷ್ಯ ಪರಂಪರೆ ಆರಂಭವಾಯಿತು ಎಂದು ಡಾ. ವಿಜಯಕುಮಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಮಹರ್ಷಿ ಶ್ರೀವಾಲ್ಮೀಕಿ ಜಯಂತಿಯಲ್ಲಿ ಮಹರ್ಷಿಗಳ ಭಾವಚಿತ್ರಕ್ಕೆ ಗಣ್ಯರೊಡನೆ ಪುಷ್ಪಾರ್ಚನೆ ಸಲ್ಲಿಸಿದ ಅವರು, ರಾಮಾಯಣ ರಚಿಸಿದ ವಾಲ್ಮೀಕಿ ಅವರ ಮೂಲ ಹೆಸರು ರತ್ನಾಕರ. ಲವ-ಕುಶ ಇವರ ಶಿಷ್ಯರು. ಕ್ರೌಂಚ ಪಕ್ಷಿಯ ವಧೆಯಿಂದ ಘಾಸಿಗೊಂಡ ಹೆಣ್ಣು ಕ್ರೌಂಚಪಕ್ಷಿಯು ಅಲ್ಲೇ ಪ್ರಾಣಬಿಟ್ಟಿದ್ದನ್ನು ಕಂಡು ವಾಲ್ಮೀಕಿ ಅವರ ಮನಕರಗಿ ಮುಂದೆ ಅವರು ಕವಿಯಾದರು ಎಂದರು.
ರಾಜರಕ್ಷಣೆ, ಯುದ್ಧಕಲೆ, ವಿಜ್ಞಾನಿಯಾಗಿ ಹಾಗೂ ಸಮಾಜ ಸುಧಾರಣೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಮಹರ್ಷಿಗಳು, ಆತ್ಮ ಪರಿಶೀಲನೆ, ಪರಿವರ್ತನೆ, ಕರುಣೆ, ಜ್ಞಾನ ಪಸರಿಸುವಿಕೆ, ಘನತೆ ಮತ್ತು ಸಮಾನ ಗೌರವ, ಮಹಿಳೆಯರ ಗೌರವ, ನಾಯಕತ್ವದ ಗುಣ, ವಿಮರ್ಶಾತ್ಮಕ ಚಿಂತನೆ ಎಂಬ ಏಳು ವಿಚಾರಗಳನ್ನು ಅಳವಡಿಸಿಕೊಂಡಿದ್ದರು ಎಂದರು.
ಪರೀಕ್ಷಾಂಗ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆದಿಕವಿ ಮಹರ್ಷಿ ವಾಲ್ಮೀಕಿರವರು 7 ಕಾಂಡಗಳು ಮತ್ತು 24 ಸಾವಿರ ಪುಟಗಳ ರಾಮಾಯಣವನ್ನು ಸಂಸ್ಕøತ ಭಾಷೆಯಲ್ಲಿ ರಚಿಸಿದ್ದಾರೆ. ಈ ಮಹಾಕಾವ್ಯದ ಮೂಲಕ ಸರ್ವಜನತೆಗೆ ಜೀವನ ಮೌಲ್ಯಗಳನ್ನು, ತತ್ವಾದರ್ಶಗಳನ್ನು ಬರವಣಿಗೆ ಮೂಲಕ ತಿಳಿಸಿಕೊಟ್ಟ ಮಹಾನ್ ಚೇತನ ಅವರು ಎಂದರು.
ನೆಹರು, ಟಿಎಸ್ ಏಲಿಯಟ್, ಕುವೆಂಪು ಮೊದಲಾದ ಜ್ಞಾನಜೀವಿಗಳು ರಾಮಾಯಣದಂತಹ ಮಹಾಕಾವ್ಯ ಇನ್ನೊಂದಿಲ್ಲ ಎಂದು ಸಾರಿದ್ದಾರೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್