



ಬಳ್ಳಾರಿ, 26 ಅಕ್ಟೋಬರ್ (ಹಿ.ಸ.)
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಗಣನೀಯ ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಸಾಧ್ಯತೆಯಿದ್ದು, ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಜಿಲ್ಲೆಯಲ್ಲಿನ ಪ್ರಸ್ತುತ ಕುಡಿಯುವ ನೀರಿನ ಪರಿಸ್ಥಿತಿ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಗರದ ನೂತನ ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯದಿಂದ ಬಿಡಲಾಗುತ್ತಿರುವ ನೀರಿನಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಿ, ಎಲ್ಲಾ ಇನ್ಫಿಲ್ಟ್ರೇಷನ್ ರಿಸರ್ವಾಯರ್ಗಳನ್ನು ತಕ್ಷಣ ಭರ್ತಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಸ್ತುತ ನೀರಾವರಿ ಜೊತೆಗೆ ಕುಡಿಯುವ ನೀರಿಗೂ ಕೋಟಾ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಮುನ್ಸೂಚನೆ ಇರುವುದರಿಂದ, ತಕ್ಷಣವೇ ಕೆರೆ-ಕಟ್ಟೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದರು.
*ಅಕ್ರಮ ನೀರು ಬಳಕೆ ವಿರುದ್ಧ ಕಠಿಣ ಕ್ರಮ:*
ಕಾಲುವೆ ನೀರನ್ನು ಅಕ್ರಮವಾಗಿ ತಡೆಹಿಡಿಯುವುದು ಅಥವಾ ಪಂಪ್ ಮಾಡುವುದನ್ನು ತಡೆಯಲು ಪೊಲೀಸ್, ತಹಶೀಲ್ದಾರ್, ಇಒ ಹಾಗೂ ನೀರಾವರಿ ಇಲಾಖೆಯ ಜಂಟಿ ತಂಡಗಳು ತಕ್ಷಣವೇ ಸ್ಥಳ ಪರಿಶೀಲನೆ ಹಾಗೂ ಪೆಟ್ರೋಲಿಂಗ್ ನಡೆಸಬೇಕು. ಯಾವುದೇ ಒತ್ತಡಗಳಿಗೆ ಮಣಿಯದೆ ಅಡೆತಡೆಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.
*ಕೇವಲ ಕುಡಿಯುವ ನೀರಿಗೆ ಆದ್ಯತೆ:*
ಡ್ಯಾಂನಲ್ಲಿ ಲಭ್ಯವಿರುವ ನೀರಿನಲ್ಲಿ ಕುಡಿಯುವ ನೀರಿಗಾಗಿ ಮೀಸಲಿಡಲಾದ ಪಾಲನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಯಾವುದೇ ಕಾರಣಕ್ಕೂ ಈ ನೀರನ್ನು ಕೃಷಿ ಬೆಳೆಗಳಿಗೆ ಬಳಸಲು ಅವಕಾಶವಿಲ್ಲ. ರೈತರು ಬೆಳೆಗಳಿಗೆ ನೀರು ಬಳಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ತಿಳಿಸಿದರು.
*ಸಿರುಗುಪ್ಪ ಹಾಗೂ ಗಡಿ ಭಾಗದಲ್ಲಿ ಸಮಸ್ಯೆ:*
ಸಿರುಗುಪ್ಪ ಭಾಗದಲ್ಲಿ ನದಿ ಮತ್ತು ಕಾಲುವೆ ಆಧಾರಿತ ಕುಡಿಯುವ ನೀರಿನ ಯೋಜನೆಗಳಿಗೆ ಬೇಸಿಗೆಯಲ್ಲಿ ತೀವ್ರ ಸಮಸ್ಯೆಯಾಗುವ ಸಾಧ್ಯತೆಯಿದೆ. ಕರ್ನೂಲ್ ಜಿಲ್ಲೆಯ ಆಲೂರು ತಾಲೂಕು ಸೇರಿದಂತೆ ಆಂಧ್ರಪ್ರದೇಶ ಗಡಿ ಭಾಗದ ಅಂಚಿನಲ್ಲಿ ಅಕ್ರಮವಾಗಿ ನೀರು ಎತ್ತುವುದರಿಂದ ಕೊನೆ ಭಾಗಕ್ಕೆ ನೀರು ತಲುಪದಿರುವ ಸಮಸ್ಯೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
*ಕೆರೆಗಳ ಭರ್ತಿಗೆ ಮೊದಲ ಆದ್ಯತೆ:*
ಎಲ್ಎಲ್ಸಿ ಮತ್ತು ಎಚ್ಎಲ್ಸಿ ಕಾಲುವೆಗಳಲ್ಲಿ ನೀರು ಹರಿಯುವ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಂಡು, ಕುಡಿಯುವ ನೀರಿನ ಕೆರೆಗಳನ್ನು ನವೆಂಬರ್ 15-20ರ ಒಳಗಾಗಿ ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಬೇಕು. ಕಾಲುವೆಗಳ ಕೊನೆ ಭಾಗದ ಕೆರೆಗಳಿಗೂ ನೀರು ತಲುಪುವಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
*ಟಾಸ್ಕ್ಫೋರ್ಸ್ ಮತ್ತು ಜಂಟಿ ಕಾರ್ಯಾಚರಣೆ:* ಸಿರುಗುಪ್ಪ ಸೇರಿದಂತೆ ಹಲವು ಭಾಗಗಳಲ್ಲಿ ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತುವುದನ್ನು ತಡೆಯಲು ಕಂದಾಯ ಇಲಾಖೆ, ಪೊಲೀಸ್, ಆರ್ಡಬ್ಲ್ಯೂಎಸ್ ಹಾಗೂ ಜೆಸ್ಕಾಂ ಅಧಿಕಾರಿಗಳನ್ನೊಳಗೊಂಡ ತಾಲೂಕು ಮಟ್ಟದ ಜಂಟಿ ಕಾರ್ಯಪಡೆ ರಚಿಸಬೇಕು ಎಂದು ತಹಶೀಲ್ದಾರ್ಗಳಿಗೆ ಸೂಚಿಸಿದರು.
*ಪಂಪಿಂಗ್ ಹಾಗೂ ವಿದ್ಯುತ್ ಪರಿಶೀಲನೆ:*
ಕುಡಿಯುವ ನೀರಿನ ಸರಬರಾಜಿಗೆ ತೊಂದರೆಯಾಗದಂತೆ ಜೆಸ್ಕಾಂ ಅಧಿಕಾರಿಗಳ ಸಹಕಾರದೊಂದಿಗೆ ಅನಧಿಕೃತ ಕನೆಕ್ಷನ್ಗಳನ್ನು ಕಡಿತಗೊಳಿಸಲು ಮತ್ತು ವಾಲ್ವ್ಮೆನ್ಗಳು/ಸಿಬ್ಬಂದಿಯ ಮೇಲೆ ನಿಗಾ ಇಡಬೇಕು. ಯಾವುದೇ ಕಾರಣಕ್ಕೂ ಪಂಪಿಂಗ್ ವ್ಯವಸ್ಥೆ 3–4 ಗಂಟೆಗಳಿಗಿಂತ ಹೆಚ್ಚು ಕಾಲ ಸ್ಥಗಿತಗೊಳ್ಳದಂತೆ ನಿಗಾ ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್, ಎಎಸ್ಪಿ ನವೀನ್ ಕುಮಾರ್ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೃಹತ್ ನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ತಾಲೂಕು ತಹಶೀಲ್ದಾರರು, ತಾಪಂ ಇಓ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್