ವಾಲ್ಮೀಕಿ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು: ಸಚಿವ ರಘುಮೂರ್ತಿ
ಬೆಂಗಳೂರು, 26 ಅಕ್ಟೋಬರ್ (ಹಿ.ಸ.): ಮಹರ್ಷಿ ವಾಲ್ಮೀಕಿಯವರು ಸಮಾನತೆಗೆ ಹೆಚ್ಚಿನ ಆದ್ಯತೆ ನೀಡಿದ ಮಹನೀಯರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚ
ವಾಲ್ಮೀಕಿ ಜಯಂತಿ


ಬೆಂಗಳೂರು, 26 ಅಕ್ಟೋಬರ್ (ಹಿ.ಸ.):

ಮಹರ್ಷಿ ವಾಲ್ಮೀಕಿಯವರು ಸಮಾನತೆಗೆ ಹೆಚ್ಚಿನ ಆದ್ಯತೆ ನೀಡಿದ ಮಹನೀಯರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಕರೆ ನೀಡಿದರು.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮಾಯಣವು ಧರ್ಮಶಾಸ್ತ್ರ ಹಾಗೂ ನೀತಿಶಾಸ್ತ್ರವೂ ಆಗಿದೆ. ಇಂತಹ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರು ಸದಾ ಸ್ಮರಣೀಯರು ಎಂದು ಸಚಿವರು ಹೇಳಿದರು.

ಮಹರ್ಷಿ ವಾಲ್ಮೀಕಿಯವರು ಮಾತೃಹೃದಯದ ಸಂತಶ್ರೇಷ್ಠರು, ಮಾನವತಾವಾದಿಗಳು, ದಾರ್ಶನಿಕರು, ನೀತಿಶಾಸ್ತ್ರಜ್ಞರು, ತತ್ವಜ್ಞಾನಿಗಳು, ಮಹಾನ್ ಚಿಂತಕರು, ಅರ್ಥಶಾಸ್ತ್ರಜ್ಞರು, ಸಮಾಜ ಸುಧಾರಕರು ಹಾಗೂ ರಾಜಕೀಯ ಚಿಂತಕರಾಗಿದ್ದರು. ಧರ್ಮಶಾಸ್ತ್ರದ ಕುರಿತು ಅಪಾರ ಜ್ಞಾನ ಹೊಂದಿದ್ದ ಮಹಾನ್ ಚೇತನರಾಗಿದ್ದರು ಎಂದು ಸ್ಮರಿಸಿದರು.

ಹೆಣ್ಣು-ಗಂಡು, ಮೇಲು-ಕೀಳು, ಬಡವ-ಬಲ್ಲಿದ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಂದೇ ಎಂಬ ಮನೋಭಾವನೆಯೊಂದಿಗೆ ಬದುಕಬೇಕು. ಸ್ವಾತಂತ್ರ್ಯ ಮತ್ತು ಸಮಾನತೆ ಪ್ರತಿಯೊಬ್ಬರ ಹಕ್ಕು ಎಂಬುದನ್ನು ಅರಿಯಬೇಕು. ಆಗ ಮಾತ್ರ ಶೋಷಣೆರಹಿತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂಬುದನ್ನು ಮಹರ್ಷಿ ವಾಲ್ಮೀಕಿಯವರು ತಮ್ಮ ಚಿಂತನೆಗಳ ಮೂಲಕ ಸಾರಿದ್ದಾರೆ. ಸಂವಿಧಾನದ ಮೂಲ ಆಶಯಗಳನ್ನು ಅಂದೇ ತಮ್ಮ ಆದರ್ಶಗಳ ಮೂಲಕ ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.

ಮಹರ್ಷಿ ವಾಲ್ಮೀಕಿಯವರ ಜೀವನ, ಸಾಧನೆ ಹಾಗೂ ಆದರ್ಶಗಳನ್ನು ನಾವೆಲ್ಲರೂ ಅನುಸರಿಸಬೇಕು. ಅವರ ಮೌಲ್ಯಗಳ ಕುರಿತು ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಶ್ರಮಿಸಬೇಕು ಎಂದು ಸಚಿವ ರಘುಮೂರ್ತಿ ಕರೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande