
ಬೆಂಗಳೂರು, 26 ಅಕ್ಟೋಬರ್ (ಹಿ.ಸ.): ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ಅಕ್ಟೋಬರ್ 31 ಕೊನೆಯ ದಿನವಾಗಿದ್ದು, ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಗ್ರಾಹಕರು ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಬೆಸ್ಕಾಂ ಉಪವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸುವಂತೆ ಮನವಿ ಮಾಡಿದೆ.
ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಭಾಗ್ಯಜ್ಯೋತಿ, ಕುಟೀರಜ್ಯೋತಿ ಹಾಗೂ ಅಮೃತಜ್ಯೋತಿ ಯೋಜನೆಗಳ ಗ್ರಾಹಕರು ಸೇರಿದಂತೆ ಒಟ್ಟು 74,29,773 ಗ್ರಾಹಕರು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಈ ಪೈಕಿ ಅಕ್ಟೋಬರ್ 22ರ ವೇಳೆಗೆ 73,17,687 ಗ್ರಾಹಕರ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ. 98.49ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಕಳೆದ ಮೂರೂವರೆ ತಿಂಗಳಿನಿಂದ ಸಮೀಕ್ಷೆ ನಡೆಯುತ್ತಿದ್ದು, ಮನೆಗೆ ಬೀಗ ಹಾಕಿರುವುದು, ಮನೆ ಖಾಲಿ ಇರುವುದು ಹಾಗೂ ಇತರ ಕಾರಣಗಳಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಬೆಸ್ಕಾಂ ಕಚೇರಿಯಲ್ಲಿ ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.
ಸಮೀಕ್ಷೆ ಸಂದರ್ಭದಲ್ಲಿ ಬೀಗ ಹಾಕಿರುವ ಹಾಗೂ ಖಾಲಿ ಇರುವ ಮನೆಗಳಿಗೆ ಬೆಸ್ಕಾಂ ಸಿಬ್ಬಂದಿ ಮೂರು ಬಾರಿ ಭೇಟಿ ನೀಡಿದ್ದಾರೆ. ಅಲ್ಲದೆ, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸಂಬಂಧಪಟ್ಟ ಗ್ರಾಹಕರ ಮೊಬೈಲ್ಗಳಿಗೆ ಸಂದೇಶವನ್ನೂ ಕಳುಹಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇನ್ನೂ ಸಮೀಕ್ಷೆಗೆ ಒಳಪಡದ ಗ್ರಾಹಕರು ಅಕ್ಟೋಬರ್ 31ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆ ಸಲ್ಲಿಸಲು ಅಕ್ಟೋಬರ್ 31 ಕೊನೆಯ ಅವಕಾಶವಾಗಿದ್ದು, ಗಡುವು ವಿಸ್ತರಣೆ ಇರುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಆದ್ದರಿಂದ ಅರ್ಹ ಗ್ರಾಹಕರು ಕೊನೆಯ ದಿನದವರೆಗೆ ಕಾಯದೆ ಕೂಡಲೇ ಸಂಬಂಧಪಟ್ಟ ಉಪವಿಭಾಗ ಕಚೇರಿಯನ್ನು ಸಂಪರ್ಕಿಸಿ ದಾಖಲೆ ಸಲ್ಲಿಸುವಂತೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R