ಖರ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ, ಸೈದ್ಧಾಂತಿಕವಾಗಿ ಮಾತನಾಡಿದ್ದಾರೆ: ಬಿ.ಕೆ. ಹರಿಪ್ರಸಾದ್
ಬೆಂಗಳೂರು, 26 ಅಕ್ಟೋಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯನ್ನು ಸಮರ್ಥಿಸಿರುವ ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌, ಖರ್ಗೆ ಅವರು ಯಾರನ್ನೂ ಅವಹೇಳನ ಮಾಡಿಲ್ಲ ಅಥವಾ ವೈಯಕ್ತಿಕ ಟೀಕೆ ಮಾಡಿಲ್ಲ. ಸೈದ್ಧಾಂತಿಕವಾಗಿ
ಬಿ.ಕೆ.ಹರಿಪ್ರಸಾದ ಸಂಗ್ರಹ ಚಿತ್ರ


ಬೆಂಗಳೂರು, 26 ಅಕ್ಟೋಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯನ್ನು ಸಮರ್ಥಿಸಿರುವ ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌, ಖರ್ಗೆ ಅವರು ಯಾರನ್ನೂ ಅವಹೇಳನ ಮಾಡಿಲ್ಲ ಅಥವಾ ವೈಯಕ್ತಿಕ ಟೀಕೆ ಮಾಡಿಲ್ಲ. ಸೈದ್ಧಾಂತಿಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಖರ್ಗೆ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬ ಮಾತಿದೆ. ಅದೇ ರೀತಿ ಖರ್ಗೆ ಅವರು ಬಿಜೆಪಿಯವರು ಅನುಸರಿಸುವ ವಿಚಾರಧಾರೆಯ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂದರು.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಮಾತೃಭೂಮಿ ಎನ್ನುವುದಕ್ಕಿಂತ ಪಿತೃಭೂಮಿ, ಪುಣ್ಯಭೂಮಿ ಎಂಬ ಪರಿಕಲ್ಪನೆಗಳನ್ನು ಪ್ರತಿಪಾದಿಸುತ್ತವೆ. ಈ ಹಿನ್ನೆಲೆಯಲ್ಲಿ ಖರ್ಗೆ ಅವರು ಪಿತೃಭೂಮಿ ಮತ್ತು ಪುಣ್ಯಭೂಮಿ ಎಂದು ಹೇಳುವವರು ತಮ್ಮ ಪಿತೃಗಳೂ ಖಾಲಿ ಮಾಡಬೇಕಾಗುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಹರಿಪ್ರಸಾದ್‌ ಸಮರ್ಥಿಸಿಕೊಂಡರು.

ಪ್ರಧಾನಿ ಮೋದಿ ಅವರನ್ನು ಮಹಾನ್‌ ಮಾನವ ಎಂದು ಬಣ್ಣಿಸುವವರು, ಅವರು ಟೆಲಿಪ್ರಾಂಪ್ಟರ್‌ ಇಲ್ಲದೆ ಮಾತನಾಡಿದಾಗ ಏನು ಹೇಳುತ್ತಾರೆ ಎಂಬುದನ್ನು ಗಮನಿಸಬೇಕು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ನಾಯಕರು ಈ ಹಿಂದೆ ಬಳಸಿರುವ ಪದಪ್ರಯೋಗಗಳನ್ನು ಉಲ್ಲೇಖಿಸಿದ ಹರಿಪ್ರಸಾದ್‌, ರಾಹುಲ್‌ ಗಾಂಧಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆಯೂ ವೈಯಕ್ತಿಕ ಟೀಕೆಗಳನ್ನು ಮಾಡಲಾಗಿದೆ ಎಂದು ಆರೋಪಿಸಿದರು. ಬಿಜೆಪಿ ನಾಯಕರು ಟೀಕೆಗಳನ್ನು ಆರಂಭಿಸಿ, ಈಗ ಖರ್ಗೆ ಅವರ ಹೇಳಿಕೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.

ಸಾಮ್ರಾಟ್‌ ಅಶೋಕನ ಸಂಸ್ಕೃತಿಯ ಬಗ್ಗೆ ತಮಗೆ ಚೆನ್ನಾಗಿ ತಿಳಿದಿದೆ. ಈ ವಿಚಾರದಲ್ಲಿ ಬಿಜೆಪಿಯವರಿಂದ ಕಲಿಯಬೇಕಾದ ಅಗತ್ಯವಿಲ್ಲ ಎಂದೂ ಹರಿಪ್ರಸಾದ್‌ ತಿಳಿಸಿದರು.

ಎಸ್‌ಐಆರ್‌ ವಿರುದ್ಧ ನ. 5ರಂದು ಬೃಹತ್‌ ಹೋರಾಟ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧ ನವೆಂಬರ್‌ 5ರಂದು ಬೆಂಗಳೂರಿನಲ್ಲಿ ಬೃಹತ್‌ ಹೋರಾಟ ನಡೆಸಲಾಗುವುದು ಎಂದು ಬಿ.ಕೆ. ಹರಿಪ್ರಸಾದ್‌ ತಿಳಿಸಿದರು.

ಎಸ್‌ಐಆರ್‌ ವಿರುದ್ಧ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೋರಾಟ ನಡೆಯುತ್ತಿದ್ದು, ದೆಹಲಿಯ ರಾಮಲೀಲಾ ಮೈದಾನದಲ್ಲೂ ಪ್ರತಿಭಟನೆ ಆಯೋಜಿಸಲಾಗಿದೆ. ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕು ಎಂಬ ಉದ್ದೇಶದಿಂದ ಸಭೆ ನಡೆಸಲಾಗಿದೆ ಎಂದರು.

ನವೆಂಬರ್‌ 5ರಂದು ನಡೆಯುವ ಹೋರಾಟವು ಈ ಹಿಂದಿನ ಪ್ರತಿಭಟನೆಗಳ ಮುಂದುವರಿದ ಭಾಗವಾಗಿರಲಿದೆ. ಇದರಲ್ಲಿ ಸಿಪಿಐ, ಸಿಪಿಎಂ ಸೇರಿದಂತೆ ಇಂಡಿ ಮೈತ್ರಿಕೂಟದ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಎಸ್‌ಐಆರ್‌ ವಿರುದ್ಧ ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದಲ್ಲಿಯೂ ಹೋರಾಟ ನಡೆಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ಮಹಾತ್ಮ ಗಾಂಧೀಜಿ ಅಥವಾ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ಎರಡು ತಿಂಗಳ ಕಾಲ ನಿರಂತರ ಕಾರ್ಯಕ್ರಮ

ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯು ಈಗಾಗಲೇ ಎರಡು ತಿಂಗಳ ಕಾಲ ನಡೆಯುವ ಹೋರಾಟದ ಕಾರ್ಯಕ್ರಮವನ್ನು ರೂಪಿಸಿದೆ. 'ಮತ ಕಳವು, ದೇಶ ಉಳಿಸಿ, ಮತ ಉಳಿಸಿ' ಎಂಬ ಘೋಷಣೆಯೊಂದಿಗೆ ಜಿಲ್ಲಾ ಮತ್ತು ಬ್ಲಾಕ್‌ ಮಟ್ಟಗಳಲ್ಲಿ ನಿರಂತರ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ ಎಂದು ಹರಿಪ್ರಸಾದ್‌ ಹೇಳಿದರು.

ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ಬ್ಲಾಕ್‌ಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಬೇಕು. ಗಾಂಧೀಜಿ ಅಥವಾ ಅಂಬೇಡ್ಕರ್‌ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande