ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅಕ್ಷಮ್ಯ: ಛಲವಾದಿ ನಾರಾಯಣಸ್ವಾಮಿ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯನ್ನು ಖಂಡಿಸಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕತ್ವದ ವಿರುದ್ಧ ಟೀಕಿಸಿದ ಅವರು, ಮತಗಳ್ಳತನದ ಆರೋಪಗಳಿಗೆ ಆಧಾರವೇನು ಎಂದು ಪ್ರಶ್ನಿಸಿದ್ದಾರೆ.
Chalavadi-Narayanaswamy-Slams-Kharge-Over-Modi-Remarks


ಬೆಂಗಳೂರು, 26 ಅಕ್ಟೋಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಅಕ್ಷಮ್ಯ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಖರ್ಗೆ ಅವರ ಹೇಳಿಕೆ ಖಂಡಿಸಿ ಬಿಜೆಪಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಕಳಪೆ ನಾಯಕತ್ವವಿದ್ದು, ಅದಕ್ಕೆ ತಕ್ಕಂತೆ ಪಕ್ಷದ ವ್ಯವಸ್ಥೆಯೂ ಕಳಪೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಬಳಿಕ ಹತಾಶೆಯಿಂದ ವರ್ತಿಸುತ್ತಿದ್ದು, ನಾಯಕರ ಮಾತುಗಳಿಗೆ ಯಾವುದೇ ಇತಿಮಿತಿ ಇಲ್ಲದಂತಾಗಿದೆ. ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ, ಅವರೆಲ್ಲರೂ ಬಿಜೆಪಿ ಪರವಾಗಿ ಪ್ರಚಾರ ಮಾಡುವವರಂತೆ ಕಾಣುತ್ತಿದ್ದಾರೆ. ಇಂತಹ ನಿಂದನೆಗಳಿಂದ ಕಾಂಗ್ರೆಸ್ನ ಮತಬ್ಯಾಂಕ್ ವೃದ್ಧಿಯಾಗುತ್ತದೆಯೇ ಎಂದು ಪ್ರಶ್ನಿಸಿದರು.

ಮತಗಳ್ಳತನದ ಆರೋಪಕ್ಕೆ ಆಧಾರವೇನು?

ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಪದೇಪದೆ ಮತಗಳ್ಳತನದ ಆರೋಪ ಮಾಡುತ್ತಿರುವುದನ್ನು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ, “ಎಲ್ಲಿ ಮತಗಳ್ಳತನ ನಡೆದಿದೆ? ನಿಮ್ಮ ಆರೋಪಗಳಿಗೆ ಏನು ಆಧಾರವಿದೆ? ಜನರೇ ನಾವು ಚೋರರಿಗೆ ಮತ ಹಾಕುತ್ತಿಲ್ಲ ಎಂದು ಹೇಳುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.

ಖರ್ಗೆ ಅವರು ಯಾವ ಉದ್ದೇಶದಿಂದ ಇಷ್ಟು ಕೆಳಮಟ್ಟದ ಹೇಳಿಕೆ ನೀಡಿದ್ದಾರೆ? ಯಾರನ್ನು ಓಲೈಸಲು ಇಂತಹ ಮಾತುಗಳನ್ನು ಆಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕರ್ನಾಟಕದವರಾಗಿ ಪ್ರಧಾನಿಯಾದಾಗ ಸಂತಸಪಟ್ಟಿದ್ದೆವು. ಅದೇ ರೀತಿ, ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದಾಗಲೂ ಸಂತೋಷವಾಗಿತ್ತು. ಆದರೆ, ಅವರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ. ಪ್ರಧಾನಿ ಮೋದಿ ಅವರು ಖರ್ಗೆ ಅವರಿಗೆ ಏನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಮೋದಿ ನಾಯಕತ್ವ ಕಂಡು ಹತಾಶೆಯೇ?

ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ನಾಯಕತ್ವ ಪ್ರದರ್ಶಿಸುತ್ತಿದ್ದು, ವಿದೇಶಗಳಲ್ಲಿಯೂ ಪ್ರಶಂಸೆ ಪಡೆಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರಲ್ಲಿ ಹತಾಶೆ ಉಂಟಾಗಿದೆಯೇ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಆರ್ಎಸ್ಎಸ್ ಮತ್ತು ಬಿಜೆಪಿ ಅಪ್ಪಟ ಭಾರತೀಯ ಸಂಸ್ಥೆಗಳು. ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದವರೂ ಭಾರತೀಯರೇ ಎಂದು ಹೇಳಿದ ಅವರು, ಕಾಂಗ್ರೆಸ್ ನಾಯಕತ್ವದ ಕುರಿತು ಟೀಕಿಸಿದರು. ಬಿಜೆಪಿ ನಾಯಕರನ್ನು ಎಷ್ಟೇ ನಿಂದಿಸಿದರೂ ಜನರು ಅದಕ್ಕೆ ಮನ್ನಣೆ ನೀಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸಭೆ ಮತ್ತು ಭಾಷಣಗಳಿಗೆ ಜನರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೂ ಪ್ರಧಾನಿ ಮೋದಿ ಅವರೇ ಕಾರಣವೇ ಎಂದು ವ್ಯಂಗ್ಯವಾಡಿದರು.

ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಮಾತನಾಡುವಾಗ ಜವಾಬ್ದಾರಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande