
ಬೆಂಗಳೂರು, 25 ಅಕ್ಟೋಬರ್ (ಹಿ.ಸ.):
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವಿಜಯದಶಮಿ ಪಥಸಂಚಲನದಲ್ಲಿ ಪಾಲ್ಗೊಂಡ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪಥಸಂಚಲನಕ್ಕೆ ರಾಜ್ಯ ಸರ್ಕಾರ ಕೊನೆ ಕ್ಷಣದಲ್ಲಿ ಅನುಮತಿ ನೀಡಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಆರ್ಎಸ್ಎಸ್ ದೇಶಭಕ್ತಿ ಮತ್ತು ದೇಶಪ್ರೇಮದ ಸಂಕೇತವಾಗಿರುವ ಸಂಘಟನೆಯಾಗಿದೆ. ದೇಶಕ್ಕೆ ಸಂಕಷ್ಟ ಎದುರಾದಾಗ, ಯುದ್ಧದ ಸಂದರ್ಭದಲ್ಲಿ ಹಾಗೂ ಪ್ರಕೃತಿ ವಿಕೋಪಗಳ ಸಮಯದಲ್ಲಿ ದೇಶದ ಪರವಾಗಿ ನಿಲ್ಲುವ ಸಂಘಟನೆ ಇದು ಎಂದು ಅಶೋಕ್ ಹೇಳಿದರು.
‘ಭಾರತ್ ಮಾತಾಕಿ ಜೈ’ ಮತ್ತು ‘ವಂದೇ ಮಾತರಂ’ ಘೋಷವಾಕ್ಯಗಳೊಂದಿಗೆ ಕಾರ್ಯನಿರ್ವಹಿಸುವ ಆರ್ಎಸ್ಎಸ್, ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಜಯನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾರಾಯಣಸ್ವಾಮಿ ಮತ್ತು ರಾಮಮೂರ್ತಿ ಅವರೊಂದಿಗೆ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಅಶೋಕ್, ರಾಜ್ಯದ ವಿವಿಧ ಭಾಗಗಳಿಂದ ಸ್ವಯಂಸೇವಕರು ಭಾಗವಹಿಸಿರುವುದು ಸಂತಸದ ಸಂಗತಿ ಎಂದರು.
ಸರ್ಕಾರದ ವಿರುದ್ಧ ಟೀಕೆ
ಪಥಸಂಚಲನಕ್ಕೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಲವು ನಿರ್ಬಂಧಗಳನ್ನು ವಿಧಿಸಿ, ಕೊನೆಯ ಕ್ಷಣದವರೆಗೂ ವಿಳಂಬ ಮಾಡಿದೆ ಎಂದು ಅಶೋಕ್ ಆರೋಪಿಸಿದರು. ಹಿಂದಿನ ಪ್ರಧಾನಿಗಳಾದ ಇಂದಿರಾ ಗಾಂಧಿ ಅಥವಾ ಜವಾಹರಲಾಲ್ ನೆಹರೂ ಅವರ ಕಾಲದಲ್ಲಿಯೂ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ ಎಂದು ಅವರು ಟೀಕಿಸಿದರು.
ಸರ್ಕಾರದ ನಿರ್ಬಂಧಗಳು ಮತ್ತು ಅಡೆತಡೆಗಳ ನಡುವೆಯೂ ಪಥಸಂಚಲನವನ್ನು ಶಾಂತಿಯುತವಾಗಿ ಹಾಗೂ ವಿಜೃಂಭಣೆಯಿಂದ ನಡೆಸಲಾಗಿದೆ. ದೇಶದ ಸೌಹಾರ್ದತೆ ಮತ್ತು ಶಾಂತಿಯನ್ನು ಕಾಪಾಡುವ ದೃಷ್ಟಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆರ್. ಅಶೋಕ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R