ಹರಿಹರ ಶಾಸಕ ಬಿ.ಪಿ. ಹರೀಶ್ ಗೆ ಎಂ.ಪಿ. ರೇಣುಕಾಚಾರ್ಯ ತಿರುಗೇಟು
ದಾವಣಗೆರೆ, 25 ಅಕ್ಟೋಬರ್ (ಹಿ.ಸ.): ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಹೇಳಿಕೆಗಳಿಗೆ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ದಾವಣಗೆರೆಯ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧದ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಹೊಂದಾಣಿಕೆ ರಾಜಕೀಯ ಮಾಡುವುದ
MP-Renukacharya Hits Back at Harihar MLA BP Harish in Davanagere


ದಾವಣಗೆರೆ, 25 ಅಕ್ಟೋಬರ್ (ಹಿ.ಸ.):

ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಹೇಳಿಕೆಗಳಿಗೆ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ದಾವಣಗೆರೆಯ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧದ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಹೊಂದಾಣಿಕೆ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

“ನಾನು ಯಾರ ಬಗ್ಗೆ ಮಾತನಾಡಬಾರದು ಎಂಬುದಕ್ಕೆ ಲಕ್ಷ್ಮಣರೇಖೆ ಎಳೆದುಕೊಂಡಿದ್ದೆ. ನಮ್ಮ ಪಕ್ಷದ ಹಿರಿಯರಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅವರ ಬಗ್ಗೆ ಮಾತನಾಡಬಾರದು ಎಂಬ ಸೂಚನೆ ಇತ್ತು.

ಆದರೂ ನನ್ನಿಂದ ತಪ್ಪಾಗಿಲ್ಲ. ನಾನು ಮಾತನಾಡದಿದ್ದರೆ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಈ ವಿಚಾರದಲ್ಲಿ ರಾಷ್ಟ್ರೀಯ ನಾಯಕರು, ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಬಳಿ ಕ್ಷಮೆ ಕೇಳುತ್ತೇನೆ” ಎಂದು ರೇಣುಕಾಚಾರ್ಯ ತಿಳಿಸಿದರು.

ಹರೀಶ್ ಅವರು ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಹೇಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, “ನನ್ನನ್ನು ಮಂತ್ರಿ ಮಾಡುವ ಯೋಗ್ಯತೆ ಮತ್ತು ತಾಕತ್ತು ನಿನಗಿಲ್ಲ. ಬಿ.ಎಸ್. ಯಡಿಯೂರಪ್ಪ, ದಿವಂಗತ ಅನಂತಕುಮಾರ್ ಹಾಗೂ ಕೆ.ಎಸ್. ಈಶ್ವರಪ್ಪ ಅವರ ಆಶೀರ್ವಾದ ಮತ್ತು ಬೆಂಬಲದಿಂದ ನಾನು ಮಂತ್ರಿಯಾಗಿದ್ದೆ” ಎಂದು ಹೇಳಿದರು.

2008ರ ಚುನಾವಣೆಯ ಸಂದರ್ಭದಲ್ಲಿ ಹರೀಶ್ ಅವರಿಗೆ ತಾವು ಆರ್ಥಿಕ ನೆರವು ನೀಡಿದ್ದಾಗಿ ರೇಣುಕಾಚಾರ್ಯ ಹೇಳಿಕೊಂಡರು. “2008ರ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿದ್ದರೂ ಸಂಸದರ ಕಚೇರಿಯಲ್ಲಿ ನಿನಗೆ ಚುನಾವಣೆಗೆ ಹಣ ಕೊಟ್ಟಿದ್ದೇನೆ.

ಎಷ್ಟು ಕೊಟ್ಟಿದ್ದೇನೆ ಎಂಬುದನ್ನು ಈಗ ಹೇಳುವುದಿಲ್ಲ. ಹರೀಶ್ ಮತ್ತು ಸಿದ್ದೇಶ ಅವರು ನನ್ನ ಎದುರಿಗೆ ಬರಲಿ, ಮುಖಾಮುಖಿಯಾಗಿ ಮಾತನಾಡೋಣ” ಎಂದು ಸವಾಲು ಹಾಕಿದರು.

2008ರಿಂದ 2014ರವರೆಗೆ ಹರೀಶ್ ಅವರು ಬ್ಲ್ಯಾಕ್ಮೇಲ್ ರಾಜಕಾರಣ ಮಾಡುತ್ತಿದ್ದರು ಎಂದು ಆರೋಪಿಸಿದ ರೇಣುಕಾಚಾರ್ಯ, 2013ರ ಚುನಾವಣೆಯಲ್ಲಿ ಸೋತ ಬಳಿಕ ಹರೀಶ್ ಅವರು ಬೆಂಗಳೂರಿನ ಜಯನಗರದ ಹಳೆಯ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು ಎಂದು ಹೇಳಿದರು.

“ನಾನು ಚುನಾವಣೆಯಲ್ಲಿ ಸೋತರೂ ಕ್ಷೇತ್ರದಲ್ಲೇ ಉಳಿದು ಜನರೊಂದಿಗೆ ಇದ್ದೆ. ಆದರೆ, ನೀನು ಸೋತ ಬಳಿಕ ಕ್ಷೇತ್ರದಿಂದ ದೂರವಾಗಿದ್ದೆ” ಎಂದು ಟೀಕಿಸಿದರು.

ತಮ್ಮ ವಿರುದ್ಧ ಹರೀಶ್ ಏಕವಚನದಲ್ಲಿ ಮಾತನಾಡಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಅವರು, “ನಾನು ಕೂಡ ಹಳ್ಳಿಯಿಂದ ಬಂದವನು. ಬೇಕೆಂದರೆ ಹತ್ತು ಪಟ್ಟು ಮಾತನಾಡಬಲ್ಲೆ. ಆದರೆ, ರಾಜಕೀಯದಲ್ಲಿ ಮಾತನಾಡುವಾಗ ಮಿತಿಯಿರಬೇಕು” ಎಂದರು.

ಹರೀಶ್ ಅವರ ತಾಯಿ ಕುರಿತ ವಿಚಾರವನ್ನೂ ಪ್ರಸ್ತಾಪಿಸಿದ ರೇಣುಕಾಚಾರ್ಯ, ಅವರ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ವ್ಯಕ್ತಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಈ ಕುರಿತು ಕ್ಷೇತ್ರದ ಜನರು ತಮಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಅವರು ಹೇಳಿದರು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದ್ದನ್ನು ನೆನಪಿಸಿದ ರೇಣುಕಾಚಾರ್ಯ, ಶಾಮನೂರು ಕುಟುಂಬದೊಂದಿಗೆ ಹರೀಶ್ ಅವರ ರಾಜಕೀಯ ಸಂಬಂಧದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು.

ಕಾಂಗ್ರೆಸ್ನ ರಾಷ್ಟ್ರೀಯ ನಾಯಕರನ್ನು ಸ್ವಾಗತಿಸಲು ಹರೀಶ್ ಅವರು ಮುಂದಾಗುವ ರಾಜಕೀಯ ನಿಲುವಿನ ಬಗ್ಗೆಯೂ ರೇಣುಕಾಚಾರ್ಯ ಟೀಕಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande